ಮುಂಬೈ:ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಭಾನುವಾರ ರಾತ್ರಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಡಿಸೆಂಬರ್ 2 ಅಥವಾ 3 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಹೊಸ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 5 ರಂದು ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಹಾಯುತಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ:ಫಡ್ನವೀಸ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡನೇ ಅವಧಿ ಕೆಲವೇ ದಿನಗಳ ಕಾಲ ಇತ್ತು. ಇನ್ನು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಅವರು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ರಾಜ್ಯದ ನೂತನ ಸಿಎಂ ಯಾರು ಎಂಬುದನ್ನು ಬಿಜೆಪಿ ನಿರ್ಧರಿಸಲಿದೆ ಎಂದಿದ್ದು, ಸರ್ಕಾರ ರಚನೆ ವಿಚಾರವಾಗಿ ಮಹಾಯುತಿ ಪಾಲುದಾರರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸತಾರಾ ಜಿಲ್ಲೆಯ ತಮ್ಮ ಸ್ಥಳೀಯ ಡೇರ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ರಚನೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಮತ್ತು ಮಹಾಯುತಿಯ ಮೂರು ಮಿತ್ರಪಕ್ಷಗಳಾದ ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಮ್ಮತದ ಮೂಲಕ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದರು.