ನವದೆಹಲಿ:ದೆಹಲಿಯ ಹಳೆ ರಾಜಿಂದರ್ ನಗರದಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖಡಕ್ ಕ್ರಮ ಕೈಗೊಂಡಿದ್ದಾರೆ. ರಾಜಿಂದರ್ ನಗರ ಠಾಣೆ ಪೊಲೀಸರು ಕೋಚಿಂಗ್ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಾಲೀಕ ಹಾಗು ಸಂಯೋಜಕರನ್ನು ಬಂಧಿಸಿದ್ದಾರೆ.
ನೀರು ತುಂಬಿದ ನೆಲಮಾಳಿಗೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳನ್ನು ಶ್ರೇಯಾ ಯಾದವ್ (ಅಂಬೇಡ್ಕರ್ ನಗರ, ಉತ್ತರ ಪ್ರದೇಶ), ತಾನ್ಯಾ ಸೋನಿ (ತೆಲಂಗಾಣ) ಮತ್ತು ನವೀನ್ ಡೆಲ್ವಿನ್ (ಎರ್ನಾಕುಲಂ, ಕೇರಳ) ಎಂದು ಗುರುತಿಸಲಾಗಿದೆ.
ದೆಹಲಿ ಕೇಂದ್ರ ಡಿಸಿಪಿ ಎಂ.ಹರ್ಷವರ್ಧನ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. "ಕೋಚಿಂಗ್ ಸೆಂಟರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 106 (1), 152, 290 ಮತ್ತು 35ರ ಅಡಿಯಲ್ಲಿ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೋಚಿಂಗ್ ಕೇಂದ್ರದ ಮಾಲೀಕರು, ಸಂಯೋಜಕರು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.