ನವದೆಹಲಿ: ರಾಷ್ಟ್ರ ರಾಜಧಾನಿಯ ಸಫ್ದರ್ ಜಂಗ್ ಆಸ್ಪತ್ರೆಯಿಂದ ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಮಗುವನ್ನು ಉತ್ತರ ಪ್ರದೇಶದ ಶಹಜಹಾನಪುರ ರೈಲ್ವೆ ನಿಲ್ದಾಣದಿಂದ ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಸಹಯೋಗದೊಂದಿಗೆ ಅತ್ಯಂತ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೈಋತ್ಯ) ಆಕಾಂಕ್ಷಾ ಯಾದವ್, "ದೂರುದಾರ ಮಹಿಳೆ (ಮಗುವಿನ ತಾಯಿ) ನವೆಂಬರ್ 15 ರಂದು ತನ್ನ ಪತಿಯ ಮೂತ್ರಪಿಂಡದ ಚಿಕಿತ್ಸೆಗಾಗಿ ಸಫ್ದರ್ ಜಂಗ್ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಅಪರಿಚಿತ ಮಹಿಳೆಯೊಬ್ಬಳು ಅವಳೊಂದಿಗೆ ಮಾತನಾಡುತ್ತ ಅವಳ ವಿಶ್ವಾಸ ಗಳಿಸಿದಳು. ಅದೇ ವಿಶ್ವಾಸದಲ್ಲಿ ಮಗುವನ್ನು ಎತ್ತಿಕೊಂಡಂತೆ ನಟಿಸಿ ಮಗುವಿನೊಂದಿಗೆ ಆಸ್ಪತ್ರೆಯಿಂದ ಹೊರ ಹೋಗಿದ್ದಳು. ನಂತರ ವ್ಯಕ್ತಿಯೊಬ್ಬನೊಂದಿಗೆ ಆಕೆ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಳು." ಎಂದು ಹೇಳಿದರು.
ಮಗು ಕಾಣೆಯಾದ ಬಗ್ಗೆ ಸಫ್ದರಜಂಗ್ ಎನ್ ಕ್ಲೇವ್ ಪೊಲೀಸ್ ಠಾಣೆಯಲ್ಲಿ ತಕ್ಷಣ ಎಫ್ಐಆರ್ ದಾಖಲಿಸಿ ಎಸಿಪಿ ರಣಬೀರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಆರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ದೆಹಲಿ-ಎನ್ಸಿಆರ್ನ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ತಂಡಗಳನ್ನು ರವಾನಿಸಿ ತೀವ್ರ ತಪಾಸಣೆ ಮಾಡಲಾಯಿತು ಹೆಚ್ಚುವರಿ ಡಿಸಿಪಿ ಯಾದವ್ ಹೇಳಿದರು.
ಸಫ್ದರ್ ಜಂಗ್ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ, ಮಹಿಳೆಯನ್ನು ಗುರುತಿಸಿ ಆಕೆ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿರುವುದು ಪತ್ತೆಯಾಯಿತು. ಅಲ್ಲಿ ಇಬ್ಬರು ಶಂಕಿತ ಆರೋಪಿಗಳು ಬರೇಲಿಗೆ ಹೋಗುವ ಸದ್ಭಾವನಾ ಎಕ್ಸ್ಪ್ರೆಸ್ ರೈಲು ಹತ್ತಿರುವುದು ಕಾಣಿಸಿತ್ತು ಎಂದು ಅವರು ಹೇಳಿದರು.
"ಶಂಕಿತರು ಮಾರುವೇಷದಲ್ಲಿದ್ದರೂ, ಅವರನ್ನು ಬಂಧಿಸಿ ಮಗುವನ್ನು ರಕ್ಷಿಸಲಾಯಿತು. ಆರೋಪಿಗಳನ್ನು ಉತ್ತರ ಪ್ರದೇಶದ ಮಾಹಿ ಸಿಂಗ್ (24) ಮತ್ತು ರೋಹಿತ್ ಕುಮಾರ್ (32) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮಗುವನ್ನು ಮರಳಿ ಅದರ ಪಾಲಕರಿಗೆ ಹಸ್ತಾಂತರಿಸಲಾಗಿದ್ದು, ಅಪಹರಣ ಪ್ರಕರಣ ಸುಖಾಂತ್ಯವಾಗಿದೆ.
ಇದನ್ನೂ ಓದಿ : 'ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆ ಸ್ಥಳಾಂತರಿಸಿ' ಫಾರೂಕ್ ಅಬ್ದುಲ್ಲಾ ಹೀಗೆ ಹೇಳಿದ್ದು ಏಕೆ?