ನವದೆಹಲಿ:ಹರಿಯಾಣ ಸರ್ಕಾರ ದೆಹಲಿ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ದೆಹಲಿಯ ಜಲಸಂಪನ್ಮೂಲ ಸಚಿವೆ ಅತಿಶಿ ಶುಕ್ರವಾರ ಭೋಗಲ್, ಜಂಗ್ಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಧರಣಿ ಆರಂಭಿಸುವ ಮುನ್ನ ಅತಿಶಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ, ಸುನಿತಾ ಕೇಜ್ರಿವಾಲ್, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಈ ಮಧ್ಯೆ, ಅರವಿಂದ್ ಕೇಜ್ರಿವಾಲ್ ತಮಗೆ ಬರೆದಿರುವ ಪತ್ರವನ್ನು ಓದಿದ ಪತ್ನಿ ಸುನಿತಾ ಕೇಜ್ರಿವಾಲ್, "ದೆಹಲಿ ಜನರು ನೀರಿನ ಸಮಸ್ಯೆ ಎದುರಿಸುತ್ತಿರುವುದು ನೋಡಿ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಅತಿಶಿ ಅವರ ಈ ಹೋರಾಟ ಯಶಸ್ವಿಯಾಗಲಿ ಹಾಗೂ ದೆಹಲಿ ನಿವಾಸಿಗಳಿಗೆ ಪರಿಹಾರ ಸಿಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವೆ ಅತಿಶಿ, ಮಹಾತ್ಮ ಗಾಂಧಿಯವರು ಅನ್ಯಾಯದ ವಿರುದ್ಧ ಹೋರಾಡಬೇಕಾದರೆ, ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ದೆಹಲಿ ಪರ ಜಲ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ನಡುವೆ ದೆಹಲಿ ಸರ್ಕಾರದ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ಸಚಿವೆ ಅತಿಶಿ ಅವರು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಈಗ ಕೇವಲ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಗರಂ ಆಗಿದೆ.