ದಾವಣಗೆರೆ: ಬೆಣ್ಣೆ ದೋಸೆ. ಇದು ದಾವಣಗೆರೆಯ ವಿಶಿಷ್ಟ ತಿಂಡಿ. ಇಂದಿಗೂ ಜನಸಾಮಾನ್ಯರು, ರಾಜಕೀಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿಗೆ ದಾವಣಗೆರೆ ಬೆಣ್ಣೆ ದೋಸೆ ಅಂದ್ರೆ ಅಚ್ಚುಮೆಚ್ಚು. ದಾವಣಗೆರೆಗೆ ಯಾರೇ ಭೇಟಿ ಕೊಟ್ಟರೂ ಗರಿಗರಿಯಾದ ಬೆಣ್ಣೆ ದೋಸೆ ಸವಿಯದೆ ತಮ್ಮ ಊರುಗಳಿಗೆ ಹಿಂದಿರುಗಿದ್ದೇ ಇಲ್ಲಬಹುದೇನೋ. ಬೆಣ್ಣೆ ದೋಸೆ ದಾವಣಗೆರೆ ಜನರಿಗೆ ಪರಿಚಯವಾಗಿ 97 ವರ್ಷಗಳನ್ನು ಪೂರೈಸಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾದ ದೋಸೆ ಮೇನಿಯಾ ಇಂದಿಗೂ ಅದೇ ಸ್ವಾದ ಉಳಿಸಿಕೊಂಡಿದೆ.
1928ರಲ್ಲಿ ಅಂದರೆ ಸ್ವಾತಂತ್ರ್ಯಾಪೂರ್ವದಲ್ಲಿ ಈ ತಿಂಡಿಯನ್ನು ದಾವಣಗೆರೆಗೆ ಪರಿಚಯಿಸಿದ ಕೀರ್ತಿ ಚೆನ್ನಮ್ಮಜ್ಜಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಚೆನ್ನಮ್ಮ ಅಜ್ಜಿ ಬಳಿಕ ಬೆಣ್ಣೆ ದೋಸೆಯನ್ನು ಮತ್ತಷ್ಟು ಖ್ಯಾತಿ ಗಳಿಸಿದ್ದು ಪುತ್ರರಾದ ಶಾಂತಪ್ಪ ಹಾಗೂ ಮಹದೇವಪ್ಪ ಅವರು. ಇವರು ಆರಂಭಿಸಿದ ದೋಸೆ ಉದ್ಯಮದಿಂದಲೇ ದಾವಣಗೆರೆಗೆ 'ಬೆಣ್ಣೆ ನಗರಿ' ಎಂಬ ಗರಿ ದಕ್ಕಿದೆ.
1928ರಲ್ಲಿ ರಾಗಿ ಹಿಟ್ಟಿನಿಂದ ಬೆಣ್ಣೆ ದೋಸೆ ಪರಿಚಯವಾಗಿ ಇದೀಗ ಅಕ್ಕಿ ಹಿಟ್ಟಿನಿಂದ ತಯಾರಾಗುವ ದೋಸೆಯತನಕ 97 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನತನಕ ಚನ್ನಮ್ಮರ ಪುತ್ರರು ಒಂದೇ ಸ್ವಾದ ನೀಡ್ತಾ ಬಂದಿದ್ದಾರೆ. ಬಡವರ ಹೋಟೆಲ್ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್'ನ ಮಾಲೀಕ ಹಾಗೂ ಚೆನ್ನಮ್ಮಜ್ಜಿಯ ಮೊಮ್ಮಗ ಗಣೇಶ್ ಅವರು ಇಂದಿಗೂ ರುಚಿಯಾದ ದೋಸೆಯನ್ನು ಉಣಬಡಿಸುತ್ತಿದ್ದಾರೆ.
ವಿಶಿಷ್ಟ ತಿಂಡಿ ಪರಿಚಯಿಸಿದ್ದ ಚೆನ್ನಮ್ಮಜ್ಜಿ: ಬೆಳಗಾವಿ ಜಿಲ್ಲೆಯ ಬೀಡ್ಕಿ ಗ್ರಾಮದ ನಿವಾಸಿಯಾಗಿರುವ ಚನ್ನಮ್ಮಜ್ಜಿ ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸೀಮೆಯಾಗಿದ್ದ ದಾವಣಗೆರೆಗೆ ತನ್ನ ಮಕ್ಕಳೊಂದಿಗೆ ವಲಸೆ ಬಂದಿದ್ದರು. ಅಂದಿನ ದಾವಣಗೆರೆ ತಾಲೂಕಿನ ಆವರಗೆರೆ ಗ್ರಾಮದಲ್ಲಿ ನೆಲೆಸಿದ್ದರು.
1928ರಲ್ಲಿ ಚೆನ್ನಮ್ಮ ಅಜ್ಜಿ ದಾವಣಗೆರೆ ನಗರದ ವಸಂತ ಟಾಕೀಸ್ ಬಳಿಯ 'ಸಾವಳಗಿ ನಾಟಕ ಥಿಯೇಟರ್' ಬಳಿ ಪುಟ್ಟ ಉಪಹಾರ ಗೃಹ ಆರಂಭಿಸಿದರು. ಅಲ್ಲಿ ರಾಗಿ ಹಿಟ್ಟು ಬಳಸಿ ಬೆಣ್ಣೆ ದೋಸೆ, ಚಟ್ನಿ ಮತ್ತು ಆಲೂಗಡ್ಡೆ ಪಲ್ಯವನ್ನು ಉಣಬಡಿಸಲು ಆರಂಭಿಸಿದರು. ಅದು ಹಂತಹಂತವಾಗಿ ಖ್ಯಾತಿ ಗಳಿಸಿತು. 1938ರಲ್ಲಿ ಚೆನ್ನಮ್ಮಜ್ಜಿ ಮಕ್ಕಳಾದ ಶಾಂತಪ್ಪ ಹಾಗೂ ಮಹದೇವಪ್ಪ ಅಕ್ಕಿ ಹಿಟ್ಟಿನೊಂದಿಗೆ ದೋಸೆಯನ್ನು ತಯಾರಿಸಲು ಆರಂಭಿಸಿದ್ದರಿಂದ ದೋಸೆ ಮತ್ತಷ್ಟು ಖ್ಯಾತಿ ಗಳಿಸುವಂತೆ ಮಾಡಿದರು.
ಮರಳಿ ಊರು ಸೇರಿದ್ದ ಚನ್ನಮ್ಮಜ್ಜಿಯ ಇಬ್ಬರು ಮಕ್ಕಳು: ಚನ್ನಮ್ಮ ಅಜ್ಜಿಯ ನಾಲ್ಕು ಪುತ್ರರ ಪೈಕಿ ಬಸವಂತಪ್ಪ, ಶಂಕರಪ್ಪ ಎಂಬವರು ಮತ್ತೆ ತಮ್ಮ ಊರು ಬೆಳಗಾವಿ ಜಿಲ್ಲೆಯ ಬೀಡ್ಕಿ ಗ್ರಾಮಕ್ಕೆ ವಾಪಸಾದರು. ಉಳಿದ ಇಬ್ಬರು ಪುತ್ರರಾದ ಶಾಂತಪ್ಪ ಮತ್ತು ಮಹದೇವಪ್ಪ ಮಾತ್ರ ದಾವಣಗೆರೆ ಬಿಟ್ಟು ತೆರಳದೆ ಪ್ರತ್ಯೇಕವಾಗಿ ಎರಡು ಹೋಟೆಲ್ ತೆರೆದರು. 1944ರಲ್ಲಿ ಶಾಂತಪ್ಪ ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್' ಎಂಬ ಉಪಹಾರ ಗೃಹವನ್ನು ಆರಂಭಿಸಿದರು.
![Dosa](https://etvbharatimages.akamaized.net/etvbharat/prod-images/11-02-2025/kn-dvg-01-11-dosa-spl-pkg-7204336-full_11022025181823_1102f_1739278103_215.jpg)
ಇಂದಿಗೂ ಈ ಹೋಟೆಲನ್ನು ನಾಲ್ಕನೇ ತಲೆಮಾರಿನವರು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಶಾಂತಪ್ಪನವರ ಪುತ್ರ ಗಣೇಶ್ 30 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ತಂದೆ ಶಾಂತಪ್ಪ 50 ವರ್ಷಗಳ ತನಕ ಹೋಟೆಲ್ ನಡೆಸಿದ್ದಾರೆ ಎಂದು ಪುತ್ರ ಗಣೇಶ್ ಮಾಹಿತಿ ನೀಡಿದರು.
ಚನ್ನಮ್ಮಜ್ಜಿಯ ಮತ್ತೋರ್ವ ಪುತ್ರ ಮಹದೇವಪ್ಪನವರು ದಾವಣಗೆರೆ ನಗರದ ವಸಂತ ಥಿಯೇಟರ್ ಬಳಿ ತಮ್ಮ ಉಪಹಾರ ಗೃಹವನ್ನು ತೆರೆದರು. ಅದು ಇಂದು ಅಸ್ತಿತ್ವದಲ್ಲಿಲ್ಲ. ಆದರೆ, ಮಹಾದೇವಪ್ಪ ಅವರ ಪುತ್ರರಾದ ರವಿ ಹಾಗೂ ವಿಜಿ ಎನ್ನುವವರು ದಾವಣಗೆರೆಯ ಚರ್ಚ್ ರಸ್ತೆ, ಡೆಂಟಲ್ ಕಾಲೇಜು ರಸ್ತೆಯಲ್ಲಿ ತಮ್ಮದೇ ಆದ ಬೆಣ್ಣೆ ದೋಸೆ ಹೋಟೆಲ್ ತೆರೆದು ಗ್ರಾಹಕರಿಗೆ ಗರಿ ಗರಿಯಾದ ದೋಸೆ ಉಣ ಬಡಿಸುತ್ತಿದ್ದಾರೆ.
ಶಾಂತಪ್ಪ ಅವರ ಪುತ್ರ ಗಣೇಶ್ ಅವರು ಶಾಂತಪ್ಪ ಹೋಟೆಲ್ ನಡೆಸುತ್ತಿದ್ದಾರೆ. ಅಲ್ಲದೆ ಖುದ್ದಾಗಿ ಗಣೇಶ್ ಅವರೇ ಬೆಣ್ಣೆ ದೋಸೆ ಹಾಕುವ ಕಾಯಕ ಮಾಡ್ತಿದ್ದಾರೆ.
ಶಾಂತಪ್ಪ ಹೋಟೆಲ್ಗೆ ಜರ್ಮನಿ, ಕುವೈತ್ ಗ್ರಾಹಕರ ಲಿಂಕ್: ಈ ಬಗ್ಗೆ ಚನ್ನಮ್ಮಜ್ಜಿ ಮೊಮ್ಮಗ ಗಣೇಶ್ ಮಾತನಾಡಿ, ''1928ರಲ್ಲಿ ಆರಂಭವಾದ ಬೆಣ್ಣೆ ದೋಸೆ ಉದ್ಯಮ 97 ವರ್ಷ ಉರುಳಿದೆ. 100 ವರ್ಷ ತುಂಬಲು ಇನ್ನೂ ಮೂರು ವರ್ಷ ಮಾತ್ರ ಬಾಕಿ ಇದೆ'' ಎಂದು ಸಂತಸ ವ್ಯಕ್ತಪಡಿಸಿದರು.
![Butter](https://etvbharatimages.akamaized.net/etvbharat/prod-images/11-02-2025/kn-dvg-01-11-dosa-spl-pkg-7204336-full_11022025181823_1102f_1739278103_77.jpg)
''ಇಲ್ಲಿ ಖಾಲಿ ದೋಸೆ, ಬೆಣ್ಣೆ ದೋಸೆ ಎರಡು ರೀತಿ ದೋಸೆ ಸಿಗಲಿದೆ. ಬೆಣ್ಣೆ ದೋಸೆ ಒಂದಕ್ಕೆ 48 ರೂಪಾಯಿ ಇದ್ದು, ಖಾಲಿ ದೋಸೆಗೆ 40 ರೂಪಾಯಿ (ಮೂರಕ್ಕೆ) ದರ ನಿಗದಿ ಮಾಡಲಾಗಿದೆ. ದಾವಣಗೆರೆಯ ಇನ್ನಿತರ ಹೋಟೆಲ್ಗಳಿಗೆ ಹೋಲಿಕೆ ಮಾಡಿದರೆ ಶಾಂತಪ್ಪ ಹೋಟೆಲ್‌ನಲ್ಲಿ ದರ ಕಡಿಮೆ ಇದೆ. ಪ್ರತಿದಿನ ಬೆಳಿಗ್ಗೆ 8 ರಿಂದ 11 ಗಂಟೆ ತನಕ ಮಾತ್ರ ಸೇವೆ ನೀಡಲಾಗುತ್ತದೆ'' ಎಂದರು.
''ಶಾಂತಪ್ಪ ಹೋಟೆಲ್ಗೆ ಜರ್ಮನಿ, ಕುವೈತ್ನಿಂದ ಪ್ರವಾಸಿಗರು ಆಗಮಿಸಿ ಬೆಣ್ಣೆ ದೋಸೆ ಸವಿದಿದ್ದಾರೆ. ದೋಸೆಗಾಗಿ ಒಂದು ವಾರಕ್ಕೆ 70-80 ಸೇರು ಬೆಣ್ಣೆ ಖರ್ಚಾಗುತ್ತದೆ. ಒಂದು ದಿನಕ್ಕೆ 7-8 ಸೇರು ಬೆಣ್ಣೆಯನ್ನು ದೋಸೆಗೆ ಉಪಯೋಗ ಮಾಡಲಾಗುತ್ತದೆ'' ಎಂದು ಹೇಳಿದರು.
ಗ್ರಾಹಕ ಗೋಪಾಲ್ ಶೆಟ್ರು ಪ್ರತಿಕ್ರಿಯಿಸಿ, "ಶಾಂತಪ್ಪ ಅವರ ಕಾಲದಿಂದಲೂ ನಾನು ಬರುತ್ತಿದ್ದೇನೆ. ಸ್ವಾದ ಚೆನ್ನಾಗಿರುತ್ತದೆ. ಮಂಗಳವಾರ, ಶುಕ್ರವಾರ ಎರಡು ದಿನ ಮಾತ್ರ ಇಲ್ಲಿ ದೋಸೆಗೆ ಕೆಂಪು ಚಟ್ನಿ ಕೊಡುತ್ತಾರೆ. ಆ ಚಟ್ನಿ ತಿನ್ನಲು ಜನ ಹುಡುಕಿಕೊಂಡು ಬರುತ್ತಾರೆ. 40 ವರ್ಷದಿಂದ ಈ ಹೋಟೆಲ್ಗೆ ಬರುತ್ತಿದ್ದೇನೆ. ಅಂದು 30-50 ಪೈಸೆಗೆ ದೋಸೆ ಕೊಡುತ್ತಿದ್ದರು" ಎಂದರು.
ಐವತ್ತು ಪೈಸೆಯಿಂದ ಆರಂಭವಾದ ದರ 48 ರೂಪಾಯಿ ತಲುಪಿದೆ: ಸ್ವತಂತ್ರ್ಯಾಪೂರ್ವದಲ್ಲಿ ಬೆಣ್ಣೆ ದೋಸೆ, ಖಾಲಿ ದೋಸೆ ಕೇವಲ ಐವತ್ತು ಪೈಸೆಗೆ ಸಿಗುತ್ತಿತ್ತು. ಕಾಲ ಬದಲಾದಂತೆ 97 ವರ್ಷಗಳ ಬಳಿಕ ದರ ಬದಲಾಗಿದೆ. ಮೊದಲು ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ನೆಲದ ಮೇಲೆ ಮಣೆ ಹಾಸಿ ದೋಸೆ ಸವಿಯಲು ಅವಕಾಶ ಕೊಡಲಾಗುತ್ತಿತ್ತು. ಈಗ ಆ ಹೋಟೆಲ್ ಸ್ಟೈಲ್ ಸ್ವಲ್ಪ ಬದಲಾವಣೆ ಆಗಿದೆ. ಹೋಟೆಲ್‌ನಲ್ಲಿ ಮಣೆ ಹೋಗಿ ಟೇಬಲ್ ಬಂದಿದೆ. ಆದರೆ ಇಂದಿಗೂ ಈ ಹೋಟೆಲ್ ಹಳೇ ಮನೆಯಂತಿದೆ.
![Dosa](https://etvbharatimages.akamaized.net/etvbharat/prod-images/11-02-2025/kn-dvg-01-11-dosa-spl-pkg-7204336-full_11022025181823_1102f_1739278103_20.jpg)
ಇದನ್ನೂ ಓದಿ: ತೆಂಗಿನಕಾಯಿ ದರ ಏರಿಕೆ, ಹೋಟೆಲ್ ಮಾಲೀಕರಿಗೆ ದೋಸೆ ಜೊತೆ ಚಟ್ನಿ ಕೊಡೋದೆ ಚಿಂತೆ! - COCONUT PRICE