ಬೆಂಗಳೂರು: ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಅತ್ಯುತ್ತಮ ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ರಾಜ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ' ಇನ್ವೆಸ್ಟ್ ಕರ್ನಾಟಕ-2025ಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟಪ್ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದರು.
ಸಮಾವೇಶದಲ್ಲಿ ಜಗತ್ತಿನ ನಾನಾ ಭಾಗಗಳ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ . ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆಗಳು ಲಭ್ಯ: ಏಕಗವಾಕ್ಷಿ ಪೋರ್ಟಲ್ಗೆ ಸಿಎಂ ಚಾಲನೆ
ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ. ಬೆಂಗಳೂರಿನ ನಿರ್ಣಾಯಕ ಪಾತ್ರದಿಂದ ಭಾರತವು ವೈಮಾಂತರಿಕ್ಷ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ನಗರ ಸ್ಟಾರ್ಟ್‌ಅಪ್ ಉದ್ಯಮಿಗಳಿಗೆ ಅತ್ಯಂತ ಜನಪ್ರಿಯ ನಗರ : ಡಿಸಿಎಂ ಡಿ.ಕೆ.ಶಿವಕುಮಾರ್
ಕರ್ನಾಟಕ ಅತ್ಯುತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನವ ಸಂಪನ್ಮೂಲವನ್ನು ಹೊಂದಿದ್ದು, ಬೆಂಗಳೂರು ಜೊತೆಗೆ ಕರ್ನಾಟಕ ಹೂಡಿಕೆ ಮಾಡಲು ಅತ್ಯುತ್ತಮ ಪ್ರದೇಶವಾಗಿದೆ. ನಾವೆಲ್ಲರೂ ಸೇರಿ ಕರ್ನಾಟಕವನ್ನು ಜಾಗತಿಕ ಕೇಂದ್ರವಾಗಿ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ರಾಜ್ಯ ಸರಕಾರವು ಮುಂದಿನ ಐದು ವರ್ಷಗಳ (2025-30) ಉದ್ಯಮ ಬೆಳವಣಿಗೆಗೆ ರೂಪಿಸಿರುವ ನೂತನ ಕೈಗಾರಿಕಾ ನೀತಿಯನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಿ ಮಾತಮಾಡಿದ ಅವರು, ಹೊಸ ನೀತಿಯು ಇನ್ನು ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್-ರೈಸ್ ವಲಯದಲ್ಲಿ ರಾಜ್ಯವನ್ನು ಇಡೀ ದೇಶಕ್ಕೆ ನಂಬರ್ ಒನ್ ಆಗಿ ಪ್ರತಿಷ್ಠಾಪಿಸುವ ಹೆಗ್ಗುರಿಗಳನ್ನು ಹೊಂದಿದೆ. ಇದನ್ನೆಲ್ಲ ಸಾಧಿಸಲು ಬೆಂಗಳೂರಿನ ಆಚೆಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ/ತಾಲ್ಲೂಕುಗಳಿಗೆ ಆದ್ಯತೆ ಕೊಡಲಾಗಿದೆ. ಇದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡಲಾಗುವುದು ಎಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ ಎಂದರು.
ಬೆಂಗಳೂರು ನಗರ ಸ್ಟಾರ್ಟ್‌ಅಪ್ ಗಳನ್ನು ಸ್ಥಾಪಿಸುವ ಯುವ ಉದ್ಯಮಿಗಳಿಗೆ ಅತ್ಯಂತ ಜನಪ್ರಿಯ ನಗರ. ಜೊತೆಗೆ ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಆಯ್ಕೆ ಎಂದು ಹೇಳಿದರು.
ಖಾಸಗಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಪಿಪಿಪಿ ಮಾದರಿ ಅಳವಡಿಕೆ: ಕರ್ನಾಟಕದ ಹೊಸ ಕೈಗಾರಿಕಾ ನೀತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಆಲೋಚನೆ ಸರ್ಕಾರದ ಮುಂದಿದೆ. ಸಂಶೋಧನಾ ಕೇಂದ್ರಗಳಿಗೆ ಉತ್ತೇಜನ, ಕರ್ನಾಟಕವನ್ನು ಜ್ಞಾನ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ನನ್ನ ಪ್ರಕಾರ ಸುಮಾರು 10 ಲಕ್ಷ ಕೋಟಿ ಬಂಡವಾಳ ಹರಿವಿನ ನಿರೀಕ್ಷೆಯಿದೆ. ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸುವುದು, ಪೂರೈಕೆ ಸರಪಳಿಗಳನ್ನು ಬಲಪಡಿಸಿ, ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಸಕ್ರಿಯಗೊಳಿಸುವುದು ನಮ್ಮ ಸರ್ಕಾರದ ಮುಂದಿರುವ ಗುರಿ ಎಂದು ಡಿಸಿಎಂ ತಿಳಿಸಿದರು.
ಇದನ್ನೂ ಓದಿ: ವ್ಹೀಲ್ ಚೇರ್‌ನಲ್ಲಿ 'ಇನ್ವೆಸ್ಟ್ ಕರ್ನಾಟಕ' ಸಮಾವೇಶಕ್ಕೆ ಬಂದ ಸಿಎಂ: ಶೀಘ್ರ ಗುಣಮುಖರಾಗುವಂತೆ ರಾಜನಾಥ್ ಸಿಂಗ್ ಹಾರೈಕೆ