ಬೆಂಗಳೂರು: ಐದು ದಿನಗಳಿಂದ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ ಬಿತ್ತು.
ವೈಮಾನಿಕ ಪ್ರದರ್ಶನದ ಮೊದಲ ಮೂರು ದಿನ ದೇಶ ವಿದೇಶಗಳ ಗಣ್ಯರು ಮತ್ತು ಆಹ್ವಾನಿತರು ಪ್ರದರ್ಶನ ವೀಕ್ಷಿಸಿದರು. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಕಡೆಯ ದಿನವಾದ ಇಂದು ಬಾನಂಗಳಲ್ಲಿ ಲೋಹದ ಹಕ್ಕಿಗಳ ಹಾರಾಟವನ್ನು ಸಾವಿರಾರು ವೀಕ್ಷಕರು ಕಣ್ತುಂಬಿಕೊಂಡರು.
ಭಾರತದ ತೇಜಸ್ ಎಲ್‌ಸಿಎ, ಎಲ್‌ಹೆಚ್ ಹೆಲಿಕಾಪ್ಟರ್, ಸೂರ್ಯಕಿರಣ್, ರಷ್ಯಾ ನಿರ್ಮಿತ ಎಸ್‌ಯು-57, ಯುಎಸ್ನ ಎಫ್-35 ಸೇರಿದಂತೆ ಅನೇಕ ಫೈಟರ್ ಜೆಟ್‌ಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಐದು ದಿನಗಳ ಕಾಲ ನಡೆದ ವೈಮಾನಿಕ ಪ್ರದರ್ಶನದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ದೇಶ ವಿದೇಶಗಳ ಯುದ್ಧ ವಿಮಾನಗಳು, ತರಬೇತಿ ವಿಮಾನಗಳ ಚಿತ್ತಾಕರ್ಷಕ ಪ್ರದರ್ಶನ ನೋಡುಗರಿಗೆ ಥ್ರಿಲ್ ನೀಡಿತು. ಇಂದೂ ಸಹ ಬಿಸಿಲಿನ ನಡುವೆಯೂ ನಿಂತು ವಿಮಾನಗಳ ಪ್ರದರ್ಶನ ಕಂಡು ನೋಡುಗರು ಸಂತಸಪಟ್ಟರು.
![AERO INDIA 2025](https://etvbharatimages.akamaized.net/etvbharat/prod-images/14-02-2025/23543888_thumb-4.jpg)
ವೈಮಾನಿಕ ಪ್ರದರ್ಶನ ಮಾತ್ರವಲ್ಲದೆ ದೇಶ, ವಿದೇಶಗಳ ರಕ್ಷಣಾ ಸಾಮರ್ಥ್ಯವನ್ನು ಸಾಬೀತುಪಡಿಸುವ ಹೊಸ ಆವಿಷ್ಕಾರಗಳು, ಯುದ್ಧೋಪಕರಣಗಳ ಪ್ರದರ್ಶನ ಹಾಗೂ ಒಪ್ಪಂದಗಳಿಗೂ ಏರೋ ಇಂಡಿಯಾ ವೇದಿಕೆಯಾಗಿತ್ತು. ಹಲವು ದೇಶಗಳು ಭಾರತದ ರಕ್ಷಣಾ ಉಪಕರಣಗಳ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮತ್ತಷ್ಟು ಯಶಸ್ವಿಯಾಯಿತು.
ಇದನ್ನೂ ಓದಿ: ಹೂಡಿಕೆದಾರರ ಸಮಾವೇಶದಲ್ಲಿ ಗಮನ ಸೆಳೆದ ಪಾಡ್ ತಂತ್ರಜ್ಞಾನ: ಏನಿದು ಹೊಸ ಸಾರಿಗೆ ವ್ಯವಸ್ಥೆ?