ನವದೆಹಲಿ: ದೆಹಲಿ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಯನ್ನು ಎದುರಿಸಲು ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಸದ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 21 ಅಭ್ಯರ್ಥಿಗಳ ಹೆಸರುಗಳನ್ನ ಪಕ್ಷ ಪ್ರಕಟಿಸಿದೆ. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ. ಆದರೆ, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರಿಗೆ ಬದ್ಲಿಯಿಂದ ಟಿಕೆಟ್ ನೀಡಲಾಗಿದೆ.
Delhi Assembly Election:ಇದಲ್ಲದೇ ಮೊದಲ ಪಟ್ಟಿಯಲ್ಲಿ ಪಟಪರಗಂಜ್ ಕ್ಷೇತ್ರದಿಂದ ಅನಿಲ್ ಚೌಧರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅವಧ್ ಓಜಾ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಮುಸ್ತಫಾಬಾದ್‌ನಿಂದ ಅಲಿ ಮೆಹದಿ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಅವರು ಎಎಪಿಯ ಆದಿಲ್ ಅಹ್ಮದ್ ಖಾನ್ ಅವರನ್ನು ಎದುರಿಸಲಿದ್ದಾರೆ. ಇದಲ್ಲದೇ ಅಬ್ದುಲ್ ರೆಹಮಾನ್ರನ್ನು ಸೀಲಾಂಪುರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದು, ಇಲ್ಲಿ ಎಎಪಿ ಜುಬೈರ್ ಚೌಧರಿ ಕಣದಲ್ಲಿದ್ದಾರೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನರೇಲಾದಿಂದ ಅರುಣಾ ಕುಮಾರಿ ಅವರನ್ನು ಕಣಕ್ಕಿಳಿಸಿದ್ದು, ಇಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದಿನೇಶ್ ಭಾರದ್ವಾಜ್ ಅವರನ್ನು ಎದುರಿಸಲಿದ್ದಾರೆ. ಆದರೆ, ಪಕ್ಷವು ರಾಜಿಂದರ್ ತನ್ವಾರ್ ಅವರನ್ನು ಛತ್ತರ್‌ಪುರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಎಎಪಿ ಈ ಕ್ಷೇತ್ರದಿಂದ ಬ್ರಹ್ಮ್ ಸಿಂಗ್ ತನ್ವಾರ್ ಅಭ್ಯರ್ಥಿ ಎಂದು ಘೋಷಿಸಿದೆ.