ಜಮ್ಮು : ಪಾಕ್ ಆಕ್ರಮಿತ ಕಾಶ್ಮೀರವಿಲ್ಲದೇ (ಪಿಒಕೆ) ಜಮ್ಮು ಮತ್ತು ಕಾಶ್ಮೀರ ಅಪೂರ್ಣ. ಪಾಕಿಸ್ತಾನವು ಪಿಒಕೆಯನ್ನು ಉಗ್ರ ತಾಣವನ್ನಾಗಿ ಮಾಡಿಕೊಂಡು, ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಂಗಳವಾರ ಇಲ್ಲಿ ನಡೆದ 9ನೇ ಸಶಸ್ತ್ರ ಪಡೆಗಳ ಹಿರಿಯರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಒಕೆ ಭಾರತಕ್ಕೆ ಸೇರಿದ್ದು ಎಂದು ಗೊತ್ತಿದ್ದರೂ, ಪಾಕಿಸ್ತಾನವು ತನ್ನ ಉದ್ಧಟನತನ ಮುಂದುವರಿಸಿದೆ. ಅಲ್ಲಿ ಭಯೋತ್ಪಾದಕ ನೆಲೆಗಳನ್ನು ಸೃಷ್ಟಿಗೆ ನೆರವು ನೀಡುತ್ತಿದೆ. ಇದನ್ನು ಆ ದೇಶವು ಮೊದಲು ನಿಲ್ಲಿಸಬೇಕು ಎಂದು ಚಾಟಿ ಬೀಸಿದರು.
ಪಿಒಕೆ ಇಲ್ಲದೇ ಭಾರತದ ಜಮ್ಮು ಮತ್ತು ಕಾಶ್ಮೀರ ಪೂರ್ಣವಾಗದು. ಪಿಒಕೆ ಪಾಕಿಸ್ತಾನಕ್ಕೆ ಸಂಬಂಧವಿರದ ಪ್ರದೇಶವಾಗಿದೆ. ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು, ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಪಾಕ್ ಕುತಂತ್ರಕ್ಕೆ ತಕ್ಕ ಉತ್ತರ: ಭಾರತದೊಂದಿಗಿನ ಪ್ರತಿ ಸಂಘರ್ಷದಲ್ಲೂ ಪಾಕಿಸ್ತಾನ ಸೋಲು ಕಂಡಿದೆ. ಆದಾಗ್ಯೂ ಅದು, ಕೀಟಲೆ ಮುಂದುವರಿಸಿದೆ. 1965 ರಿಂದ ಹಿಡಿದು ಇಲ್ಲಿಯವರೆಗೂ ಪಾಕಿಸ್ತಾನವು ಭಾರತದ ಎದುರು ನಿಲ್ಲುವ ಶಕ್ತಿ ತೋರಿಸಿಲ್ಲ. ಪಾಕ್ ಸೇನೆಯ ಎಲ್ಲ ಕುತಂತ್ರಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದರು.
ಉಗ್ರರು ಅಕ್ರಮವಾಗಿ ಭಾರತದ ಗಡಿಯೊಳಗೆ ನುಗ್ಗಲು ಪಾಕಿಸ್ತಾನ ಸೇನೆ ಅನುವು ಮಾಡಿಕೊಡುತ್ತಿದೆ. 1965ರ ಸಂಘರ್ಷದಲ್ಲಿ ಭಾರತ ಸರ್ಕಾರ ಕಠಿಣ ನಿಯಮ ತಾಳಿದ್ದರೆ, ಅಂದೇ ಈ ನುಸುಳುವಿಕೆಗೆ ತಿಲಾಂಜಲಿ ಹಾಡ ಬಹುದಿತ್ತು. ಆದರೆ, ಅಂದಿನ ಸರ್ಕಾರ ಪಾಕಿಸ್ತಾನ ಸೋಲಿನ ಪ್ರಯೋಜನವನ್ನ ಪಡೆದುಕೊಳ್ಳಲಿಲ್ಲ ಎಂದು ಹೇಳಿದರು.
ಭಾರತದೊಳಗೆ ಪ್ರವೇಶಿಸುವ ಭಯೋತ್ಪಾದಕರಲ್ಲಿ ಶೇಕಡಾ 80 ಕ್ಕೂ ಹೆಚ್ಚು ಜನರು ಪಾಕಿಸ್ತಾನಿಗಳು. ದೆಹಲಿ ಮತ್ತು ಜಮ್ಮು- ಕಾಶ್ಮೀರದ ಜನರ ನಡುವಿನ ಹೃದಯದ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಹೊಸದಾಗಿ ಚುನಾಯಿತವಾಗಿರುವ ಸರ್ಕಾರವೂ ಇದೇ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂಬ ಭರವಸೆ ಇದೆ ಎಂದರು.
ಇದನ್ನೂ ಓದಿ: ಜಮ್ಮು - ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ: 6 ಸೈನಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು