ಹೈದರಾಬಾದ್(ತೆಲಂಗಾಣ): ಬಿಆರ್‌ಎಸ್ ಪಕ್ಷದ ಶಾಸಕ ಪಿ.ಕೌಶಿಕ್ ರೆಡ್ಡಿ ಅವರ ಬಂಧನದ ಬೆನ್ನಲ್ಲೇ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಪುತ್ರ ಕೆ.ಟಿ.ರಾಮರಾವ್ ಮತ್ತು ಇವರ ಸೋದರಳಿಯ ಟಿ.ಹರೀಶ್ ರಾವ್ ಅವರನ್ನು ಇಂದು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ.
ಮಾಜಿ ಸಚಿವರಾದ ರಾಮರಾವ್ ಹಾಗೂ ಹರೀಶ್ ರಾವ್ ಅವರನ್ನು ಹೈದರಾಬಾದ್ನ ಅವರ ನಿವಾಸದಲ್ಲಿ ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಬಿಆರ್‌ಎಸ್ ತಿಳಿಸಿದೆ.
ಏನಿದು ಪ್ರಕರಣ?: ಜನವರಿ 12ರಂದು ಕರೀಂ ನಗರದಲ್ಲಿ ನಡೆದ ಜಿಲ್ಲಾ ಪರಿಶೀಲನಾ ಸಮಿತಿ ಸಭೆಯಲ್ಲಿ ಜಗ್ತಿಯಾಲ್ ಶಾಸಕ ಸಂಜಯ್ ಕುಮಾರ್ ಅವರನ್ನು ನಿಂದಿಸಿದ ಆರೋಪದ ಮೇಲೆ ಹುಜೂರಾಬಾದ್ ಕ್ಷೇತ್ರದ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ಅವರನ್ನು ಸೋಮವಾರ ಬಂಧಿಸಲಾಗಿದೆ. ಪರಿಶೀಲನಾ ಸಮಿತಿ ಸಭೆಯಲ್ಲಿ ಕೌಶಿಕ್ ರೆಡ್ಡಿ ಮತ್ತು ಸಂಜಯ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆದ ನಂತರ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಸಂಜಯ್ ಕುಮಾರ್ ಅವರ ಪಕ್ಷಾಂತರದ ಬಗ್ಗೆ ಕೌಶಿಕ್ ರೆಡ್ಡಿ ಪ್ರಶ್ನೆ ಎತ್ತಿದ್ದು, ಕೂಡಲೇ ಅಲ್ಲೇ ಇದ್ದ ಸಂಜಯ್ ಕುಮಾರ್ ಹಾಗೂ ಕೌಶಿಕ್ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು.
ಶಾಸಕ ಸಂಜಯ್ ಕುಮಾರ್ ಅವರ ಪಿಎ, ನಿಂದನೆ ಹಾಗೂ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಕೌಶಿಕ್ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2024ರ ಜೂನ್ನಲ್ಲಿ ಬಿಆರ್‌ಎಸ್ ಪಕ್ಷದಿಂದ ಆಡಳಿತಾರೂಢ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಸಂಜಯ್ ಕುಮಾರ್, ಸೋಮವಾರ ತೆಲಂಗಾಣ ವಿಧಾನಸಭಾ ಸ್ಪೀಕರ್ ಜಿ.ಪ್ರಸಾದ್ ಕುಮಾರ್ ಅವರಿಗೆ ಕೌಶಿಕ್ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಕೌಶಿಕ್ ರೆಡ್ಡಿ ಬಂಧನವನ್ನು ಬಿಆರ್‌ಎಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಬಿಆರ್‌ಎಸ್ ನಾಯಕ ಕೆಟಿಆರ್ಗೆ ಇಡಿ ಸಮನ್ಸ್