ಛಿಂದ್ವಾರಾ(ಮಧ್ಯಪ್ರದೇಶ):ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆಯಾಗುವ ತರಕಾರಿ ಬೆಲೆಯಿಂದ ಜನಸಾಮಾನ್ಯರು ತತ್ತರಿಸಬಹುದು. ಆದರೆ ಅದೇ ತರಕಾರಿ ಕೃಷಿಕನ ಬದುಕನ್ನೂ ಬದಲಿಸಬಲ್ಲದು. ಇದಕ್ಕೆ ಲೇಟೆಸ್ಟ್ ಉದಾಹರಣೆ ಬೆಳ್ಳುಳ್ಳಿ. ಹೌದು. ಬೆಳ್ಳುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಬಾಮಹನವಾಡ ಎಂಬಲ್ಲಿನ ಯುವ ರೈತ ಶಿವರಾಮ್ ವರ್ಮಾ ಎಂಬವರು ಸಾಲ ಮಾಡಿ ಬೆಳ್ಳುಳ್ಳಿ ಬೆಳೆದಿದ್ದರು. ಇದೀಗ ಸುಮಾರು ಮೂರು ತಿಂಗಳಲ್ಲೇ ಅವರು ಕೋಟ್ಯಧೀಶರಾಗಿದ್ದಾರೆ.
ಸಂಪೂರ್ಣ ವಿವರ: ಕೃಷಿಯಲ್ಲಿ ಏರಿಳಿತ ಕಾಣುವ ಬೆಲೆಯ ಬಗ್ಗೆ ರೈತರು ಸದಾ ಚಿಂತಿತರಾಗಿರುತ್ತಾರೆ. ಕೆಲವೊಮ್ಮೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯಬಹುದು. ಅನೇಕ ಸಂದರ್ಭಗಳಲ್ಲಿ ಇದೇ ಬೆಲೆ ಪಾತಾಳಕ್ಕೂ ಇಳಿದು ರೈತರು ತೀವ್ರ ಸಂಕಷ್ಟ ಅನುಭವಿಸುವುದುಂಟು. ಶಿವರಾಮ್ ವರ್ಮಾ ತಮ್ಮ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆಯಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಬೀಜಕ್ಕೆ ಕೆ.ಜಿಗೆ ಸುಮಾರು 300 ರೂ. ಇತ್ತು. ಇದರಿಂದಾಗಿ ನಾಟಿ ಕೆಲಸ ಕಷ್ಟವಾಗಿತ್ತು. ಆ ನಂತರ ರೈತ ಸಾಲ ಪಡೆದು ಬಿತ್ತನೆ ಬೀಜ, ಗೊಬ್ಬರ ಪಡೆದು ಕೃಷಿ ಮಾಡಿದ್ದರು. ಅವರ ಅದೃಷ್ಟಕ್ಕೆ ಬೆಳ್ಳುಳ್ಳಿಯ ಬೆಲೆ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಕೇವಲ ಮೂರು ತಿಂಗಳಲ್ಲಿ ಸುಮಾರು 1.5 ಕೋಟಿ ರೂ ಮೌಲ್ಯದ ಬೆಳ್ಳುಳ್ಳಿಯನ್ನು ಅವರು ಪಡೆದಿದ್ದಾರೆ.
ಎಕರೆಗೆ 6ರಿಂದ 8 ಲಕ್ಷ ರೂ.ಲಾಭ: ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿಗೆ 500 ರೂ.ವರೆಗೂ ಇದೆ. ರೈತ ಶಿವರಾಮ್‌ಗೆ ಒಂದು ಎಕರೆಯಲ್ಲಿ ಸುಮಾರು 14ರಿಂದ 16 ಕ್ವಿಂಟಲ್ ಉತ್ಪನ್ನ ಸಿಕ್ಕಿದೆ. ಇದರಿಂದ ಎಕರೆಗೆ ಸುಮಾರು 8 ಲಕ್ಷ ರೂ ಲಾಭ ಕೈ ಸೇರಿದೆ. ಇವರು ಒಂದು ಎಕರೆಯಲ್ಲಿ ಸುಮಾರು 3 ಕ್ವಿಂಟಲ್ ಬೆಳ್ಳುಳ್ಳಿ ಬಿತ್ತಿದ್ದರು. ಗೊಬ್ಬರ ಸೇರಿದಂತೆ ಎಲ್ಲಾ ಖರ್ಚು ಸೇರಿ ಸುಮಾರು 1.5ರಿಂದ 2 ಲಕ್ಷ ರೂ.ವರೆಗೆ ವ್ಯಯಿಸಿದ್ದಾರೆ.