ಪಾಟ್ನಾ (ಬಿಹಾರ) :ಬಿಹಾರ ರಾಜಕೀಯ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸಿಎಂ ನಿತೀಶ್ಕುಮಾರ್ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದ್ದು, ವಿಶ್ವಾಸಮತ ಪರೀಕ್ಷೆ ನಡೆಯಲಿದೆ. ಇತ್ತ ಪ್ರಬಲ ವಿಪಕ್ಷ ಆರ್‌ಜೆಡಿ ಹೇಗಾದರೂ ಮಾಡಿ ಸರ್ಕಾರವನ್ನು ಕೆಡವಲು ತಂತ್ರ ರೂಪಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಉಳಿದಿರುವ ಕಾಂಗ್ರೆಸ್ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್ ನಾಯಕರು ಇಂದು ಬಿಹಾರಕ್ಕೆ ತೆರಳಿದ್ದಾರೆ. ನೇರವಾಗಿ ವಿಮಾನ ನಿಲ್ದಾಣದಿಂದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ನಿವಾಸಕ್ಕೆ ತೆರಳಲಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆಗೆ ಎಡಪಕ್ಷಗಳ ಶಾಸಕರು ಕೂಡ ಸೋಮವಾರದವರೆಗೆ ಇಲ್ಲಿಯೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಮೈತ್ರಿ ಮುರಿದುಕೊಂಡ ನಿತೀಶ್ಕುಮಾರ್ ಬಿಜೆಪಿ ಜೊತೆ ಸೇರಿ ನೂತನ ಸರ್ಕಾರ ರಚನೆ ಮಾಡಿದ್ದಾರೆ. ಅದರಂತೆ ಫೆಬ್ರವರಿ 12 ರಂದು ಸರ್ಕಾರದ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ವಿಶ್ವಾಸಮತ ಪರೀಕ್ಷೆಗೆ 24 ಗಂಟೆಗಳು ಮಾತ್ರ ಉಳಿದುಕೊಂಡಿದ್ದು, ರಾಜಕೀಯ ಬೆಳವಣಿಗೆಗಳು ರೋಚಕಘಟ್ಟದತ್ತ ಸಾಗಿವೆ.
243 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಯು, ಇತರ ಪಕ್ಷಗಳ 128 ಶಾಸಕರ ಬಲ ನಿತೀಶ್ಕುಮಾರ್ಗೆ ಇದೆ. ಇತ್ತ ಆರ್‌ಜೆಡಿ ತನ್ನ 79 ಶಾಸಕರು, ಕಾಂಗ್ರೆಸ್ನ 19, ಎಡಪಕ್ಷಗಳು ಮತ್ತು ಇತರರ ಬೆಂಬಲವನ್ನು ತಪ್ಪಿಸಲು ತಂತ್ರ ರೂಪಿಸುತ್ತಿದೆ.