ಪುಣೆ (ಮಹಾರಾಷ್ಟ್ರ):ಪುಣೆ ಏರ್ಪೋರ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರೇ ಕಿಡ್ನಾಪ್ ಮಾಡಿ, ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯನ್ನು ಕಿಡ್ನಾಪ್ ಮಾಡಿದ ಆರೋಪಿಗಳು, ಆಕೆಯ ಪೋಷಕರನ್ನು ಬೆದರಿಸಿ ಹಣ ಪಡೆದಿದ್ದರು. ವಿದ್ಯಾಭ್ಯಾಸಕ್ಕಾಗಿ ಲಾತೂರ್‌ನಿಂದ ಪುಣೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರೇ ಹಣ ಸುಲಿಗೆ ಮಾಡಲು ಅಪಹರಿಸಿದ್ದರು. ಹಣ ಪಡೆದ ಬಳಿಕ ಯುವತಿಯನ್ನು ಕೊಲೆ ಮಾಡಿದ್ದರು.
ಮೃತ ಯುವತಿಯ ತಂದೆ ಸೂರ್ಯಕಾಂತ್ ಜ್ಞಾನೋಬಾ ಸುಡೆ (49) ಅವರು ಮಾರ್ಚ್ 30 ರಂದು ಪುಣೆಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಭಾಗ್ಯಶ್ರೀ ಕೊಲೆಯಾದ ಲಾತೂರ್ ಮೂಲದ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಂ ಫುಲಾವಾಲೆ, ಸಾಗರ್ ಜಾಧವ್ ಮತ್ತು ಸುರೇಶ್ ಇಂದೋರ್ನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿ:ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಲಾತೂರ್ ಮೂಲದ ಭಾಗ್ಯಶ್ರೀ ಪುಣೆಯ ವಾಘೋಲಿ ಪ್ರದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದರು. ಮಾರ್ಚ್ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ವಿಮಾನ ನಿಲ್ದಾಣ ಪ್ರದೇಶದ ಫೀನಿಕ್ಸ್ ಮಾಲ್ ಸಮೀಪ ನಾಪತ್ತೆಯಾಗಿದ್ದಳು. ಈ ನಡುವೆ ಯುವತಿ ಸಂಪರ್ಕ ಇಲ್ಲದ ಕಾರಣ ಆಕೆಯ ಪೋಷಕರು ಪುಣೆಗೆ ಆಗಮಿಸಿದರು. ಯುವತಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆಕೆಯ ಪೋಷಕರ ಮೊಬೈಲ್ ಫೋನ್‌ಗೆ ಬೆದರಿಕೆಯ ಸಂದೇಶವೂ ಬಂದಿತ್ತು. 9 ಲಕ್ಷ ರೂ. ನೀಡಿ, ಇಲ್ಲವೇ ಯುವತಿಯನ್ನು ಸಾಯಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆದರೆ, ತಂದೆ ಹಣ ಕೊಟ್ಟರೂ ಯುವತಿ ಮಾತ್ರ ಜೀವಂತ ಸಿಗಲಿಲ್ಲ.