ದೆಹಲಿ: ಇಲ್ಲಿನ ರಾಜೀಂದರ್ ನಗರದ ರಾವ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯಲ್ಲಿ ಮೂವರು ವಿದ್ಯಾರ್ಥಿಗಳು ಪ್ರವಾಹದ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದ ಘಟನೆಯನ್ನು ಗಂಭೀರವಾಗಿ ಪರಗಣಿಸಿರುವ ಸುಪ್ರೀಂ ಕೋರ್ಟ್, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಇಂದು ಘಟನೆಯ ಕುರಿತು ಪ್ರತಿಕ್ರಿಯೆ ಕೇಳಿ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ಕೋಚಿಂಗ್ ಸೆಂಟರ್‌ಗಳು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಬರುವ ಆಕಾಂಕ್ಷಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ. ಇವು ಸಾವಿನ ಮನೆಗಳಾಗುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಹೊರತು ಯಾವುದೇ ಸಂಸ್ಥೆ ಕಾರ್ಯನಿರ್ವಹಿಸಲು ಅನುಮತಿಸಬಾರದು ಎಂದು ಕೋರ್ಟ್ ಆದೇಶಿಸಿದೆ.
ಸಿಬಿಐ ತನಿಖೆ:ರಾವ್ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳ ಸಾವು ಪ್ರಕರಣದ ತನಿಖೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಸಿಬಿಐಗೆ ವರ್ಗಾಯಿಸಿದೆ. ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಜಾಗೃತ ಆಯೋಗಕ್ಕೆ ಸೂಚಿಸಲಾಗಿದೆ.
ಇನ್ನು ಕೇಂದ್ರ ಗೃಹ ಸಚಿವಾಲಯ ಈಗಾಗಲೇ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಅಪಘಾತದ ಕಾರಣಗಳನ್ನು ಪರಿಶೀಲಿಸುತ್ತಿದೆ. ಈ ಸಮಿತಿಯಲ್ಲಿ ಗೃಹ ಮತ್ತು ನಗರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ದೆಹಲಿ ಪೊಲೀಸ್ ವಿಶೇಷ ಸಿಪಿ ಮತ್ತು ಅಗ್ನಿಶಾಮಕ ಸಲಹೆಗಾರರು ಸದಸ್ಯರಾಗಿರುತ್ತಾರೆ.
ಕಳೆದ ತಿಂಗಳು 27ರಂದು ರಾವ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಗೆ ಏಕಾಏಕಿ ನೀರು ನುಗ್ಗಿ ಶ್ರೇಯಾ ಯಾದವ್, ತಾನ್ಯಾ ಸೋನಿ ಮತ್ತು ನೆವಿನ್ ಡಾಲ್ವಿನ್ ಎಂಬ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ:"ಹದಗೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಬಯಸಿದ್ದವಳೇ ವ್ಯವಸ್ಥೆಗೆ ಬಲಿಯಾದಳು": IAS ಕೋಚಿಂಗ್ ಸೆಂಟರ್ಗಳ ಕಥೆ- ವ್ಯಥೆ - tanya soni lost life in delhi