ಕರ್ನಾಟಕ

karnataka

ETV Bharat / bharat

ಸಿಎಂ ವಿಜಯನ್​ಗೆ ವಿಶ್ವಾಸಾರ್ಹತೆ ಇಲ್ಲ: ಕೇರಳ ರಾಜ್ಯಪಾಲ ಖಾನ್

ಸಿಎಂ ವಿಜಯನ್ ಅವರಿಗೆ ವಿಶ್ವಾಸಾರ್ಹತೆ ಇಲ್ಲ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್ (IANS)

By ETV Bharat Karnataka Team

Published : Oct 10, 2024, 2:38 PM IST

ತಿರುವನಂತಪುರಂ:ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವಿಶ್ವಾಸಾರ್ಹತೆಯೇ ಇಲ್ಲ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಸಿದ್ದಾರೆ. ಸಿಎಂ ವಿಜಯನ್ ಮತ್ತು ರಾಜ್ಯಪಾಲ ಖಾನ್ ಮಧ್ಯೆ ದೀರ್ಘಕಾಲದಿಂದ ಶೀತಲ ಸಮರ ನಡೆಯುತ್ತಿದ್ದು, ಈಗ ರಾಜ್ಯಪಾಲರ ಹೊಸ ಆರೋಪದಿಂದ ಇದು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಯಿದೆ.

ಕಳೆದ ತಿಂಗಳು ಎಡಪಂಥೀಯ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ ಅವರು ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿರುವುದಾಗಿ ಆರೋಪಿಸಿದ ನಂತರ ಹೊಸ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಆಗಿನ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮತ್ತು ಪಿಣರಾಯಿ ವಿಜಯನ್ ಅವರ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಚಿನ್ನ ಕಳ್ಳಸಾಗಣೆ ದಂಧೆಗೆ ಕಾರಣರಾಗಿದ್ದಾರೆ ಎಂದು ಅನ್ವರ್ ಆರೋಪಿಸಿದ್ದಾರೆ.

ಇದರ ನಂತರ ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ವಿಜಯನ್, "ಮಲಪ್ಪುರಂ ಜಿಲ್ಲೆಯು ಚಿನ್ನ ಕಳ್ಳಸಾಗಾಣಿಕೆಯ ಕೇಂದ್ರವಾಗಿದೆ ಮತ್ತು ಇದರಿಂದ ಬಂದ ಹಣವನ್ನು ರಾಜ್ಯ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ" ಎಂದು ಹೇಳಿದ್ದರು.

ಸಂದರ್ಶನವು ವಿವಾದವನ್ನು ಹುಟ್ಟುಹಾಕುತ್ತಿದ್ದಂತೆ, ವಿಜಯನ್ ಅವರ ಕಚೇರಿಯಿಂದ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರಿಗೆ ಪತ್ರ ಬರೆಯಲಾಗಿದ್ದು, ಸಂದರ್ಶನದಲ್ಲಿ ಸಿಎಂ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಪ್ರದೇಶವನ್ನು ಉಲ್ಲೇಖಿಸಿಲ್ಲ, ಅವರು ರಾಜ್ಯ ವಿರೋಧಿ ಅಥವಾ ರಾಷ್ಟ್ರ ವಿರೋಧಿ ಎಂಬ ಪದಗಳನ್ನು ಮಾತ್ರ ಬಳಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಲಾಗಿದೆ.

ಒಂದು ಪಿಆರ್ ಏಜೆನ್ಸಿಯು ಸಿಎಂ ಜೊತೆಗೆ ಸಂದರ್ಶನ ಫಿಕ್ಸ್​ ಮಾಡಿತ್ತು. ಸಂದರ್ಶನದಲ್ಲಿ ಸಮಯದಲ್ಲಿ ಇಬ್ಬರು ಜನರಿದ್ದರು ಮತ್ತು ಅವರಲ್ಲಿ ಒಬ್ಬರು ನಂತರ ಸ್ಥಳದ ಹೆಸರನ್ನು ಸಂದರ್ಶನದಲ್ಲಿ ಸೇರಿಸುವಂತೆ ಸೂಚಿಸಿದ್ದರು ಎಂದು ರಾಷ್ಟ್ರೀಯ ದಿನಪತ್ರಿಕೆಯು ಸ್ಪಷ್ಟನೆ ನೀಡಿದೆ.

ಸದ್ಯ ಈ ವಿಷಯದ ಬಗ್ಗೆ ಪ್ರಶ್ನೆಗಳನ್ನೆತ್ತಿರುವ ಖಾನ್, "ಚಿನ್ನ ಕಳ್ಳಸಾಗಣೆ ವಿಷಯದ ಬಗ್ಗೆ ನನಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ನಾನು ಸಿಎಂ ಅವರನ್ನು ಕೇಳಲು ಬಯಸುತ್ತೇನೆ. ವಿಶೇಷವಾಗಿ ಅದರಿಂದ ಬರುವ ಹಣವನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದಾಗಲೂ ನನಗೆ ಏಕೆ ಹೇಳಲಿಲ್ಲ? ಈ ಬಗ್ಗೆ ನನಗೆ ತಿಳಿಸುವುದು ಅವರ ಕರ್ತವ್ಯ. ಯಾವುದೇ ಆಡಳಿತಾತ್ಮಕ ಸಮಸ್ಯೆಯನ್ನು ನನಗೆ ತಿಳಿಸಬೇಕಾಗುತ್ತದೆ. ಇದೊಂದು ಗಂಭೀರ ವಿಷಯವಾಗಿದ್ದರೂ ಅವರು ಇದರ ಬಗ್ಗೆ ನನಗೆ ಮಾಹಿತಿ ನೀಡಿಲ್ಲ" ಎಂದು ಹೇಳಿದರು.

"ಸಿಎಂ ತಾವು ಪಿಆರ್ ಏಜೆನ್ಸಿ ಹೊಂದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಸಿಎಂ ಅವರನ್ನು ಸಂದರ್ಶಿಸಲು ಪಿಆರ್ ಏಜೆನ್ಸಿ ಅವರನ್ನು ಸಂಪರ್ಕಿಸಿದೆ ಎಂದು ದಿನಪತ್ರಿಕೆಯ ಹೇಳಿಕೆಯನ್ನು ಅವರು ಏಕೆ ನಿರಾಕರಿಸಿಲ್ಲ? ಸಂದರ್ಶನದ ಸಮಯದಲ್ಲಿ ಪಿಆರ್ ಏಜೆನ್ಸಿಯ ಇಬ್ಬರು ಅಧಿಕಾರಿಗಳು ಹಾಜರಿದ್ದರು. ಸಿಎಂ ವಿಜಯನ್ ಅವರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಮತ್ತು ಅವರು ಇದನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುತ್ತಾರೆ" ಎಂದು ಖಾನ್ ಹೇಳಿದರು.

ಇದನ್ನೂ ಓದಿ :ಹನುಮಂತ ಮುಸ್ಲಲ್ಮಾನ, ರಾಮ ಆತನಿಗೆ ನಮಾಜ್​ ಹೇಳಿಕೊಟ್ಟ; ಬಿಹಾರ ಶಿಕ್ಷಕನ ವಿರುದ್ಧ ಭುಗಿಲೆದ್ದ ಆಕ್ರೋಶ

ABOUT THE AUTHOR

...view details