ಮಾಲ್ಡಾ (ಪಶ್ಚಿಮ ಬಂಗಾಳ): "ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ" ಎಂದು ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಮಾಲ್ಡಾದಲ್ಲಿ ಬುಧವಾರ ಮಾತನಾಡಿದ ಅವರು, "ನಿಮಗೆ ಒಬ್ಬನೇ ಒಬ್ಬ ಶಾಸಕನಿಲ್ಲ, ಮಾಲ್ಡಾದಲ್ಲಿ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡುತ್ತೇವೆ ಮತ್ತು ನಿಮ್ಮ ಗೆಲುವಿಗೆ ಸಹಕರಿಸುತ್ತೇವೆ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ. ಆದರೆ, ಸೀಟು ಹಂಚಿಕೆಯನ್ನು ಕಾಂಗ್ರೆಸ್ ಒಪ್ಪಲಿಲ್ಲ. ಕಾಂಗ್ರೆಸ್ ನವರು ನಮಗೆ ಹೆಚ್ಚು ಕ್ಷೇತ್ರಗಳು ಬೇಕು ಎಂದರು ನಾನು ಅದಕ್ಕೆ ಒಪ್ಪಲಿಲ್ಲ. ಕಾಂಗ್ರೆಸ್ ಮೊದಲು ಸಿಪಿಎಂ ಜೊತೆಗಿನ ಮೈತ್ರಿಯನ್ನು ತೊರೆಯಬೇಕು" ಎಂದು ಹೇಳಿದರು.
ಶುಕ್ರವಾರದಿಂದ ಮಮತಾ ಧರಣಿ:ಇದೇ ವೇಳೆ, ಮಮತಾ ಬ್ಯಾನರ್ಜಿ ಅವರು, "ಫೆಬ್ರವರಿ 2 ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಹಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕೋಲ್ಕತ್ತಾದ ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಧರಣಿ ಸತ್ಯಾಗ್ರಹ ಪ್ರಾರಂಭಿಸುವುದಾಗಿ" ತಿಳಿಸಿದ್ದಾರೆ. ಕೇಂದ್ರದಿಂದ 100 ದಿನದ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಂದ ವಂಚಿತರಾಗಿರುವವರು ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ವಂಚಿತರನ್ನು ಕೋಲ್ಕತ್ತಾಗೆ ಕರೆತರಲು ವ್ಯವಸ್ಥೆ ಮಾಡುವಂತೆ ಅವರು, ಶಾಸಕರು ಮತ್ತು ಸಂಸದರಿಗೆ ಸೂಚನೆ ನೀಡಿದ್ದಾರೆ.