ನವದೆಹಲಿ:ಗ್ರಾಹಕರು ಬಳಸುವ ಸ್ಮಾರ್ಟ್ ಫೋನ್ನ ಮಾಡೆಲ್ ಅನ್ನು ಆಧರಿಸಿ ವಿಭಿನ್ನ ದರ ವಿಧಿಸುತ್ತಿರುವ ಆರೋಪದ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಪ್ರಮುಖ ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೋಶಿ. "ಗ್ರಾಹಕರು ಬಳಸುವ ಮೊಬೈಲ್ ಫೋನ್ಗಳ (ಐಫೋನ್/ ಆಂಡ್ರಾಯ್ಡ್) ವಿವಿಧ ಮಾದರಿಗಳ ಆಧಾರದ ಮೇಲೆ ವಿಭಿನ್ನ ಪ್ರಯಾಣ ದರ ವಸೂಲಿ ಮಾಡುತ್ತಿರುವ ವಿಷಯದ ಹಿಂದಿನ ಅವಲೋಕನದ ಅನುಸರಣೆಯಾಗಿ, ಗ್ರಾಹಕ ವ್ಯವಹಾರಗಳ ಇಲಾಖೆ ಸಿಸಿಪಿಎ ಪ್ರಮುಖ ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ" ಎಂದು ಹೇಳಿದ್ದಾರೆ.
ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದಾಗ ಬೇರೆ ಬೇರೆ ಸ್ಮಾರ್ಟ್ಫೋನ್ಗಳಲ್ಲಿ ವಿಭಿನ್ನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಲವಾರು ಗ್ರಾಹಕರು ದೂರು ನೀಡಿದ ನಂತರ ಕ್ಯಾಬ್ ಅಗ್ರಿಗೇಟರ್ಗಳ ಈ ವಂಚನೆ ಬೆಳಕಿಗೆ ಬಂದಿದೆ. ಕೆಲ ಮಾದರಿಯ ಫೋನ್ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.