ಕೋಲ್ಕತ್ತಾ (ಪಶ್ಚಿಮ ಬಂಗಾಳ):ಜಾರಿ ನಿರ್ದೇಶನಾಲಯದ (ಇಡಿ) ತಂಡದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಮಾನತುಗೊಂಡಿರುವ ಟಿಎಂಸಿ ನಾಯಕ ಷಹಜಹಾನ್ ಶೇಖ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನ ಆರೋಪ ಹೊರಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಹುಕೋಟಿ ಪಡಿತರ ಹಂಚಿಕೆ ಹಗರಣದ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ತನಿಖೆಗಾಗಿ ಷಹಜಹಾನ್ ಶೇಖ್ ಮನೆ ಮೇಲೆ ಜನವರಿ 5ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗಾಗಲೇ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಆಹಾರ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ಶೇಖ್ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಈ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಸುಮಾರು 1,000 ಜನರ ಗುಂಪು ತನಿಖಾಧಿಕಾರಿಗಳ ಮೇಲೆ ದಾಳಿಯೇ ನಡೆಸಿತ್ತು.
ಈ ಪ್ರಕರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ಬಸಿರ್ಹತ್ ವಿಶೇಷ ನ್ಯಾಯಾಲಯದಲ್ಲಿ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ. ಷಹಜಹಾನ್ ಶೇಖ್, ಆತನ ಸಹೋದರ ಅಲಂಗೀರ್ ಮತ್ತು ಸಹಚರರಾದ ಜಿಯಾವುದ್ದೀನ್ ಮೊಲ್ಲಾ, ಮಫುಜರ್ ಮೊಲ್ಲಾ ಮತ್ತು ದಿದರ್ಬಕ್ಷ್ ಮೊಲ್ಲಾ ಸೇರಿದಂತೆ ಏಳು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.