ಕರ್ನಾಟಕ

karnataka

ETV Bharat / bharat

ಮಧ್ಯಂತರ ಬಜೆಟ್ 2024: ಇನ್ನಷ್ಟು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರದ ಯೋಜನೆ - ವೈದ್ಯಕೀಯ ಕಾಲೇಜುಗಳ ಸ್ಥಾಪನೆ

ಅಸ್ತಿತ್ವದಲ್ಲಿರುವ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಮತ್ತು ಈ ವಿಷಯಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದಿನ ಬಜೆಟ್​​ನಲ್ಲಿ ಹೇಳಿದ್ದಾರೆ.

ವೈದ್ಯಕೀಯ ಕಾಲೇಜು
ವೈದ್ಯಕೀಯ ಕಾಲೇಜು

By ETV Bharat Karnataka Team

Published : Feb 1, 2024, 4:02 PM IST

ನವದೆಹಲಿ:ಮಧ್ಯಂತರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಈ ವಿಷಯವನ್ನು ಪರಿಶೀಲಿಸಲು ಸಮಿತಿಯನ್ನೂ ಕೂಡಾ ರಚಿಸಲಿದೆ ಎಂದು ಹಣಕಾಸು ಸಚಿವರು ಇಂದು ಮಂಡಿಸಿದ ತಮ್ಮ ಬಜೆಟ್​ ಭಾಷಣದಲ್ಲಿ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-2025 ರ ಮಧ್ಯಂತರ ಬಜೆಟ್ ಮಂಡಿಸಿದರು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9-14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಒಂದು ಸಮಗ್ರ ಕಾರ್ಯಕ್ರಮದ ಅಡಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸೀತಾರಾಮನ್ ಸಂಸತ್ತಿನಲ್ಲಿ ಹೇಳಿದ್ದಾರೆ.

ಸಮಸ್ಯೆ ಪರಿಶೀಲನೆಗೆ ಸಮಿತಿ ರಚನೆ : ಹಲವಾರು ಯುವಕರು ವೈದ್ಯರಾಗಿ ಅರ್ಹತೆ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರು ಸುಧಾರಿತ ಆರೋಗ್ಯ ಸೇವೆಗಳ ಮೂಲಕ ನಮ್ಮ ಜನರಿಗೆ ಸೇವೆ ಸಲ್ಲಿಸುವ ಗುರಿ ಹೊಂದಿದ್ದಾರೆ. ವಿವಿಧ ಇಲಾಖೆಗಳ ಅಡಿ ಅಸ್ತಿತ್ವದಲ್ಲಿರುವ ಆಸ್ಪತ್ರೆಗಳಲ್ಲಿ ಈಗಾಗಲೇ ಇರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಯೋಜಿಸಿದೆ. "ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಸಂಬಂಧಿತ ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ಕೂಡಾ ರಚಿಸಲಾಗುವುದು'' ಎಂದು ಸೀತಾರಾಮನ್ ಹೇಳಿದ್ದಾರೆ.

ಆರೋಗ್ಯ ರಕ್ಷಣೆ ವಿಸ್ತರಣೆ :ಲಸಿಕೆಯನ್ನು ನಿರ್ವಹಿಸಲು ಹೊಸದಾಗಿ ವಿನ್ಯಾಸಗೊಳಿಸಲಾದ ಯು-ವಿನ್ ಪ್ಲಾಟ್‌ಫಾರ್ಮ್ ಮತ್ತು ಮಿಷನ್ ಇಂದ್ರಧನುಷ್‌ ಯೋಜನೆ ಮೂಲಕ ತೀವ್ರತರವಾದ ಪ್ರಯತ್ನಗಳನ್ನು ಮಾಡಲಾಗುವುದು. ಈ ಮೂಲಕ ದೇಶಾದ್ಯಂತ ತ್ವರಿತವಾಗಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ರಾಷ್ಟ್ರದ ಜನತೆಗೆ ಭರವಸೆ ನೀಡಿದರು. "ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಅಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣ ಮಾಡಲಾಗುವುದು ಹಾಗೂ ಸುಧಾರಿತ ಪೌಷ್ಟಿಕಾಂಶ ವಿತರಣೆ ಮಾಡಲಾಗುವುದು. ಅಷ್ಟೇ ಅಲ್ಲ ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಯನ್ನ ಇನ್ನಷ್ಟು ಬಲ ಪಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. "ಆಯುಷ್ಮಾನ್ ಭಾರತ್ ಯೋಜನೆಯ ಅಡಿ ಆರೋಗ್ಯ ರಕ್ಷಣೆಯನ್ನು ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ವಿಸ್ತರಿಸಲಾಗುವುದು" ಎಂದು ಸಚಿವರು ತಮ್ಮ ಬಜೆಟ್​ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಪರಿಷ್ಕೃತ ಮತ್ತು ಬಜೆಟ್ ಅಂದಾಜುಗಳ ಬಗ್ಗೆ ಮಧ್ಯಂತರ ಬಜೆಟ್ 2024 ಏನು ಹೇಳುತ್ತದೆ?

ABOUT THE AUTHOR

...view details