ಹಮೀರ್‌ಪುರ (ಹಿಮಾಚಲಪ್ರದೇಶ) :ವಿವಾಹ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ನಾಲ್ಕು ದಿನಗಳಲ್ಲೇ ನವವಧು ಹಣ ಮತ್ತು ಆಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಮೋಸ ಹೋದ ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಮಾಚಲಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಜಿಲ್ಲೆಯ ಸಾಹಿ ಗ್ರಾಮದ ಯುವಕನೊಬ್ಬ ತನಗೆ ವಧು ಮತ್ತು ಮದುವೆ ನಿಶ್ಚಯ ಮಾಡಿಕೊಟ್ಟ ಮಧ್ಯವರ್ತಿಯೇ ಮೋಸ ಮಾಡಿದ್ದಾರೆ. ತನಗೆ ಸೇರಿದ ಹಣ ಮತ್ತು ಚಿನ್ನಾಭರಣವನ್ನು ಎಗರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯುವಕನ ಆರೋಪವೇನು?:ಪೊಲೀಸರ ಮಾಹಿತಿ ಪ್ರಕಾರ, ದೂರುದಾರ ಯುವಕ ಮದುವೆ ನಿಶ್ಚಯಕ್ಕೆ ವ್ಯಕ್ತಿಯೊಬ್ಬರಿಗೆ 1.50 ಲಕ್ಷ ರೂಪಾಯಿ ನೀಡಿದ್ದರು. ಮಾತಿನಂತೆ, 2024ರ ಡಿಸೆಂಬರ್ 13ರಂದು, ಯುವಕ ಯುವತಿಯೊಂದಿಗೆ ಮದುವೆಯಾಗಲು ಭೋರಂಜಿ ನ್ಯಾಯಾಲಯಕ್ಕೆ ಬಂದಿದ್ದ. ಆದರೆ ನ್ಯಾಯಾಲಯದಲ್ಲಿ ದಾಖಲೆ ಪರಿಶೀಲನೆ ವೇಳೆ ಯುವತಿಯ ಜನನ ಪ್ರಮಾಣಪತ್ರ ಇರಲಿಲ್ಲ. ಆಗ ಯುವತಿ ಮತ್ತು ಮಧ್ಯವರ್ತಿ ಶೀಘ್ರದಲ್ಲೇ ಜನನ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ವಕೀಲರು ಅಫಿಡವಿಟ್ ಮೂಲಕ ಅವರಿಬ್ಬರ ಮದುವೆಯನ್ನೂ ಮಾಡಿದ್ದರು ಎಂದು ದೂರಿನಲ್ಲಿ ಯುವಕ ವಿವರಿಸಿದ್ದಾರೆ.
ನ್ಯಾಯಾಲಯದಲ್ಲಿ ಮದುವೆಯಾದ ನಂತರ, ತನ್ನ ಕುಟುಂಬ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸ್ವಗ್ರಾಮದ ದೇವಸ್ಥಾನದಲ್ಲಿ ಯುವತಿಯೊಂದಿಗೆ ಸಪ್ತಪದಿ ತುಳಿದಿರುವಾಗಿ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.