ಮುಂಬೈ: 2001ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್ಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಅಮಾನತು ಮಾಡಿ, ಜಾಮೀನು ನೀಡಿದೆ. 2001 ರಲ್ಲಿ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠ ಒಂದು ಲಕ್ಷ ಬಾಂಡ್ನೊಂದಿಗೆ ಜಾಮೀನು ನೀಡಿದೆ.
ನ್ಯಾ. ರೇವತಿ ಮೊಹಿತೆ ದೆರೆ ಮತ್ತು ನ್ಯಾ ಪೃಥ್ವಿರಾಜ್ ಚೌಹಣ್ ಅವರ ಪೀಠ ಈ ಆದೇಶ ನೀಡಿದೆ. ಹೋಟೆಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್ ಜಾಮೀನು ಪಡೆದರೂ, ಇತರ ಕ್ರಿಮಿನಲ್ ಪ್ರಕರಣದಲ್ಲಿ ಅವರು ಜೈಲಿನಲ್ಲಿಯೇ ಇರಲಿದ್ದಾರೆ. ಜೀವಾವಧಿ ಶಿಕ್ಷೆ ರದ್ದು ಮಾಡಬೇಕು ಮತ್ತು ಮಧ್ಯಂತರ ಜಾಮೀನು ನೀಡುವಂತೆ ಕೋರಿ ರಾಜನ್ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸೆಂಟ್ರಲ್ ಮುಂಬೈನಲ್ಲಿನ ಗಮ್ದೆವಿಯಲ್ಲಿನ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕ ಜಯ ಶೆಟ್ಟಿಯನ್ನು ರಾಜನ್ ಗ್ಯಾಂಗ್ 2001ರ ಮೇ 4ರಂದು ಹೋಟೆಲ್ನ ಮೊದಲ ಮಹಡಿಯಲ್ಲಿ ಗುಂಡಿಕ್ಕಿ ಕೊಂದಿತ್ತು.