ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್ ಸಿಗದೆ ಇದ್ದ ಕಾರಣಕ್ಕೆ ಕಾಣಿಸಿಕೊಂಡಿದ್ದ ಬಂಡಾಯವನ್ನು ಶಮನಗೊಳಿಸುವಲ್ಲಿ ಶಾಸಕ ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ.
ಮೂರು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಗೆಲ್ಲಬೇಕೆಂದು ಹೊರಟಿರುವ ಬಿಜೆಪಿ ಪಕ್ಷಕ್ಕೆ ಈ ಆಂತರಿಕ ಬಂಡಾಯ ಸಮಸ್ಯೆ ಒಡ್ಡುವ ಸಾಧ್ಯತೆಗಳಿದ್ದವು. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಂಡಾಯ ಶಮನಗೊಳಿಸುವಂತೆ ರೆಡ್ಡಿಗೆ ನೀಡಿದ ಸೂಚನೆಯಂತೆ ಶಾಸಕ ಜನಾರ್ದನ ರೆಡ್ಡಿ ಬಂಡಾಯ ಶಮನಕ್ಕೆ ಪ್ರಯತ್ನಿಸಿ ಅದರಲ್ಲಿ ಸಫಲರಾಗಿದ್ದಾರೆ.
"ಜನಾರ್ದನ ರೆಡ್ಡಿ ಹಾಗೂ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಬಂಡಾಯದಿಂದ ಹಿಂದೆ ಸರಿದಿದ್ದೇನೆ" ಎಂದು ತಿಳಿಸಿರುವ ಕೆ.ಎಸ್. ದಿವಾಕರ್ ಅವರು, "ಸಂಡೂರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ, ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಂಡು ಬರಲು ಅವಿರತ ಶ್ರಮಿಸುತ್ತೇನೆ" ಎಂದು ಘೋಷಣೆ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಜರುಗಿದ ಪಕ್ಷದ ಕಾರ್ಯಕರ್ತರು ಹಾಗೂ ದಿವಾಕರ್ ಬೆಂಬಲಿಗರ ಸಭೆಯಲ್ಲಿ ಕೆ.ಎಸ್. ದಿವಾಕರ್ ಅವರನ್ನು ಮನವೊಲಿಕೆ ಮಾಡಲಾಗಿದೆ.
ಬಳಿಕ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, "ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ದಿವಾಕರ್‌ಗೆ ಕರೆ ಮಾಡಿದ್ದಾರೆ. ಬೇರೆ ಬೇರೆ ಕಡೆಯಿಂದ ಒತ್ತಡ ಬಂದಿತ್ತು. ಆದರೆ ದಿವಾಕರ್ ಪಕ್ಷ ಬಿಟ್ಟು ಹೋಗಿಲ್ಲ, ಹೋಗಲ್ಲ. ಬಂಗಾರು ಹನುಮಂತ 1999 ರಿಂದಲೂ ಕೆಲಸ ಮಾಡಿದ್ದಾರೆ. ದಿವಾಕರ್ ಮಾದರಿಯಲ್ಲಿ ಬಂಗಾರು ಹನುಮಂತ ಕೂಡ ಕೆಲಸ ಮಾಡಿದ್ದಾರೆ. ದಿವಾಕರ್ ಮಾನಸಿಕವಾಗಿ ನೋವುಂಡಿದ್ದರು. ಕಾರ್ಯಕರ್ತರ ಮನವೊಲಿಸಿ ಮತ್ತೊಮ್ಮೆ ಬಿಜೆಪಿಯಲ್ಲಿ ಮುಂದುವರೆಯಲಿದ್ದಾರೆ. ದಿವಾಕರ್ ತಮ್ಮ ಬೆಂಬಲಿಗರನ್ನು ತಾವೇ ಸಮಾಧಾನ ಮಾಡಿದ್ದಾರೆ" ಎಂದರು.
"ದಿವಾಕರ್ ಅವರಿಗೆ ರಾಜ್ಯ ಕಾರ್ಯದರ್ಶಿ ಸ್ಥಾನವನ್ನು ನೀಡಲಾಗಿದೆ. ಶಾಸಕ ಸ್ಥಾನಕ್ಕಿಂತಲೂ ಪಕ್ಷದಲ್ಲಿನ ಜವಾಬ್ದಾರಿ ದೊಡ್ಡದು. ಪಕ್ಷದ ನಿಷ್ಠೆಯಿಂದ ದುಡಿದವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯವಿದೆ ಎಂಬುದನ್ನು ಮರೆಯಬಾರದು. ದಿವಾಕರ್‌ಗೆ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರ ನನಗೂ ಇದೆ. ಆದರೆ, ಪಕ್ಷದ ನಿರ್ಧಾರಕ್ಕೆ ತಲೆಬಾಗಬೇಕು. ಮೂರೂವರೆ ವರ್ಷಕ್ಕೂ ಮೊದಲೇ ಮತ್ತೆ ಚುನಾವಣೆ ನಡೆದರೆ ಅಚ್ಚರಿಯಿಲ್ಲ" ಎಂದು ಹೇಳುವ ಮೂಲಕ ಬಂಡಾಯ ಎದ್ದಿದ್ದ ದಿವಾಕರ್ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶವಿದೆ ಎಂದು ಜನಾರ್ದನ ರೆಡ್ಡಿ ಸಮಾಧಾನ ಪಡಿಸಿದ್ದಾರೆ.
"ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 25ನೇ ತಾರೀಖು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ" ಎಂದು ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ತಿಳಿಸಿದರು.
ಇದೇ ವೇಳೆ ಕೆ.ಎಸ್. ದಿವಾಕರ್ ಅವರನ್ನು ಪಕ್ಷದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಆದೇಶ ಪತ್ರವನ್ನು ದಿವಾಕರ್‌ಗೆ ರೆಡ್ಡಿ ಹಸ್ತಾಂತರಿಸಿದರು.
ಕೆ.ಎಸ್.ದಿವಾಕರ್ ಮಾತನಾಡಿ, "ಟಿಕೆಟ್ ಸಿಗದೇ ಇರೋದು ಬೇಸರವಾಗಿರೋದು ನಿಜ. ಅದರೆ ಪಕ್ಷದ ನಿರ್ಧಾರಕ್ಕೆ ಬದ್ಧ. ಸಂಡೂರು ಕ್ಷೇತ್ರ ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಣ್ಣ ಅವರು ಮಾತನಾಡಿದ್ದಾರೆ. ರಾಜ್ಯಕಾರ್ಯದರ್ಶಿ ಸ್ಥಾನಮಾನ ನೀಡಿರೋದು ಸಂತಸವಾಗಿದೆ" ಎಂದರು.
"ಜನಾರ್ದನ ರೆಡ್ಡಿ ವ್ಯಕ್ತಿಯಲ್ಲ ಶಕ್ತಿ. ಹೀಗಾಗಿ ಅವರ ಜೊತೆ ಇರುತ್ತೇನೆ. ಹಿಂದೆ ಕೆಆರ್ಪಿ ಪಕ್ಷದಿಂದ ಟಿಕೆಟ್ ನೀಡಿದ್ರು. ಅವರ ಜೊತೆ ಇರುವೆ. ಇದೀಗ ಜನಾರ್ದನ ರೆಡ್ಡಿ ಪಕ್ಷದ ಜೊತೆಗೆ ಇರಲು ಸೂಚನೆ ನೀಡಿದ್ದಾರೆ. ಬಿಜೆಪಿ ಒಳಜಗಳದಲ್ಲಿ ತುಕರಾಂ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಇಲ್ಲಿ ಬಿಜೆಪಿ ಗೆಲ್ಲಲು ಸಾಕಷ್ಟು ಅವಕಾಶವಿದೆ. ಜನಾರ್ದನ ರೆಡ್ಡಿ ಈ ಬಾರಿ ನಮ್ಮ ಜೊತೆಗೆ ಇದ್ದಾರೆ. ಸಂಡೂರು ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಥಾಪಿತ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಯಾಗಿ 31 ಸಾವಿರ ಮತಗಳನ್ನು ಪಡೆದು ಗಮನ ಸೆಳೆದಿದ್ದ ಕೆ.ಎಸ್. ದಿವಾಕರ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ಖಾಯಂ ಎಂದೇ ಹೇಳಲಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಕೆ. ಎಸ್. ದಿವಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು.
ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಂತಸ ಮೂಡಿಸಿತ್ತು. ಕೆ. ಎಸ್. ದಿವಾಕರ್ ಬಂಡಾಯ ಎದ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭದ ತುತ್ತು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ದಿವಾಕರ್ ಬಂಡಾಯ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗುತ್ತದೆ ಎಂದರಿತ ಬಿಜೆಪಿ ರಾಜ್ಯ ನಾಯಕರು, ದಿವಾಕರ್ ಅವರ ಮನವೊಲಿಸುವ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿಗೆ ವಹಿಸಿದ್ದರು.
ಎರಡು ದಿನಗಳ ಕಾಲ ಜರುಗಿದ ಮಾತುಕತೆಯ ಬಳಿಕ ದಿವಾಕರ್ ಕೊನೆಗೆ ರೆಡ್ಡಿ ಸಲಹೆಯಂತೆ ಪಕ್ಷದ ಅಭ್ಯರ್ಥಿ ಹನುಮಂತು ಅವರ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿ ಘೋಷಿಸಿದ್ದಾರೆ.
ಇದನ್ನೂ ಓದಿ: ಸಂಡೂರು ಉಪಚುನಾವಣೆ: ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜನಾರ್ದನ ರೆಡ್ಡಿ-ಶ್ರೀರಾಮುಲು