ಮುಂಬೈ: ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಠಾಕ್ರೆ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಎಸ್ ಠಾಕ್ರೆ ಅವರು ತಮ್ಮ ಪುತ್ರ ಅಮಿತ್ (32) ಅವರನ್ನು ಮಾಹಿಮ್ ವಿಧಾನಸಭಾ ಕ್ಷೇತ್ರದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ಮರಾಠಿಗರ ಭದ್ರಕೋಟೆಯಾಗಿರುವ ಮಾಹಿಮ್ ಕ್ಷೇತ್ರದಲ್ಲಿ ಎಂಎನ್ಎಸ್ನ ಹಿರಿಯ ನಾಯಕ ನಿತಿನ್ ಸರದೇಸಾಯಿ 2009 ರಲ್ಲಿ ಗೆದ್ದಿದ್ದರು. ನಂತರ 2014 ಮತ್ತು 2019 ರಲ್ಲಿ (ಅವಿಭಜಿತ) ಶಿವಸೇನೆಯ ಸದಾನಂದ ಎಸ್ ಸರ್ವಾಂಕರ್ ವಿರುದ್ಧ ಇವರು ಸೋತರು. ಈಗಾಗಲೇ ಮೂರು ಬಾರಿ ಶಾಸಕರಾಗಿರುವ ಆಡಳಿತಾರೂಢ ಶಿವಸೇನೆ ಮೈತ್ರಿಕೂಟದ ಹಾಲಿ ಶಾಸಕ ಸರ್ವಾಂಕರ್ (ದಾದರ್ನಿಂದ ಒಮ್ಮೆ ಮತ್ತು ಮಾಹಿಮ್ನಿಂದ ಎರಡು ಬಾರಿ) ಮತ್ತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗ ಠಾಕ್ರೆ ಉತ್ತರಾಧಿಕಾರಿಯು ಕಣಕ್ಕೆ ಧುಮುಕಿರುವುದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ಒಂದು ಕಾಲದಲ್ಲಿ ಠಾಕ್ರೆ ಕುಟುಂಬಸ್ಥರು ನೇರವಾಗಿ ಯಾವತ್ತೂ ರಾಜಕೀಯಕ್ಕೆ ಇಳಿದಿರಲಿಲ್ಲ. ಆದರೆ ಬಾಳಾಸಾಹೇಬ ಠಾಕ್ರೆ ಅವರ ನಂತರ ಅವರ ಪುತ್ರ ಉದ್ಧವ್ ಠಾಕ್ರೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ಈಗ ಅಮಿತ್ ಅವರು ರಾಜಕೀಯ ಪ್ರವೇಶಿಸಿದ ಠಾಕ್ರೆ ಕುಟುಂಬದ ನಾಲ್ಕನೇ ಸದಸ್ಯರಾಗಿದ್ದಾರೆ.
2019 ರಲ್ಲಿ, ಪ್ರಸ್ತುತ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ತಮ್ಮ ಮೊದಲ ಪ್ರಯತ್ನಗಳಲ್ಲಿಯೇ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಸಚಿವರಾದರು. ಆಗಿನ ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಉದ್ಧವ್ ಠಾಕ್ರೆ ಎಂಎಲ್ಸಿಯಾದರೆ, ಅವರ ಪುತ್ರ ಆದಿತ್ಯ ಪ್ರತಿಷ್ಠಿತ ವರ್ಲಿ ವಿಧಾನಸಭಾ ಸ್ಥಾನದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಈ ಹಿಂದೆ, ರಾಜ್ ಠಾಕ್ರೆ ಅವರ ದೂರದ ಸಂಬಂಧಿ, ಎಂಎನ್ಎಸ್ ಉಪಾಧ್ಯಕ್ಷರಾಗಿರುವ ಶಾಲಿನಿ ಜೀತೇಂದ್ರ ಠಾಕ್ರೆ ಅವರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು.
ಮಾಹಿಮ್ ಕ್ಷೇತ್ರದಲ್ಲಿ ಅಮಿತ್ ಎದುರಾಳಿ ಸರ್ವಂಕರ್ ಅವರು ಸರ್ಕಾರದಲ್ಲಿ ಸಚಿವರಾಗಿದ್ದು, 223 ವರ್ಷ ಪರಂಪರೆಯನ್ನು ಹೊಂದಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷರೂ ಆಗಿದ್ದಾರೆ. ಹೀಗಾಗಿ ಅಮಿತ್ರ ಗೆಲುವಿಗಾಗಿ ಎಂಎನ್ಎಸ್ ಜಾಗರೂಕತೆಯಿಂದ ತಂತ್ರ ಹೆಣೆಯುತ್ತಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ, ಎಂಎನ್ಎಸ್ ತಾನು ಸ್ಪರ್ಧಿಸಿದ್ದ 101 ಸ್ಥಾನಗಳಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.
ಇದನ್ನೂ ಓದಿ: ಶ್ರೀ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಒಪ್ಪಂದ 5 ವರ್ಷ ವಿಸ್ತರಣೆಗೆ ಭಾರತ, ಪಾಕಿಸ್ತಾನ ಸಮ್ಮತಿ