ವಯನಾಡು, ಕೇರಳ: ಕೇರಳದ ವಯನಾಡು ಲೋಕಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರೆ ಸ್ಥಳೀಯ ಕಾಂಗ್ರೆಸ್ ನಾಯಕರು ಈ ವೇಳೆ ಜೊತೆಯಾದರು.
ಮಂಗಳವಾರ ಸಂಜೆಯೇ ಪ್ರಿಯಾಂಕಾ ವಯನಾಡಿಗೆ ಆಗಮಿಸಿದ್ದರು. ತಮ್ಮ ಸಹೋದರ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಿರುವ, ಅವರ ತಾಯಿ ಸೋನಿಯಾ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದರು.
Congress General Secretary Smt. @priyankagandhi ji signed her nomination papers in the presence of local Congress leaders.
— Congress (@INCIndia) October 23, 2024
She will shortly begin her roadshow in Kalpetta to thank and seek the blessings of the lovely people of Wayanad. pic.twitter.com/Cu5CBkDHVa
ಪ್ರಿಯಾಂಕಾ ರೋಡ್ ಶೋಗೆ ಜನಸಾಗರ: ಇದೆ ವೇಳೆ ಕಲ್ಪೆಟ್ಟಾದ ಹೊಸ ಬಸ್ ನಿಲ್ದಾಣದಿಂದ ಸಾಗಿದ ಈ ಬೃಹತ್ ರೋಡ್ ಶೋ ವಾಹನದಲ್ಲಿ ಪ್ರಿಯಾಂಕಾ ಜೊತೆಗೆ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಗ ಕೂಡ ಜೊತೆಯಾದರು. 25 ಕಿ.ಮೀ ಸಾಗಿದ ರೋಡ್ ಶೋದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಕಂಡು ಬಂತು. ಯುಡಿಎಫ್ ಕಾರ್ಯಕರ್ತರಯ, ಬೆಂಬಲಿಗರು ಮಾರ್ಗದ ಉದ್ದಕ್ಕೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪರವಾಗಿ ಘೋಷಣೆಗಳನ್ನು ಕೂಗಿದರು.
ಪ್ರಿಯಾಂಕಾ ಕೂಡ ದಾರಿ ಉದ್ದಕ್ಕೂ ನಗುಮೊಗದಿಂದ ಜನರಿಗೆ ಕೈ ಬೀಸಿದರು. ರೋಡ್ ಶೋದ ತೆರೆದ ವಾಹನದಲ್ಲಿ ಮಿತ್ರಪಕ್ಷವಾದ ಯೂನಿಯನ್ ಮುಸ್ಲಿಂ ಲೀಗ್ ಸೈಯದ್ ಸಾದಿಕ್ ಅಲಿ ಶಿಹಬ್ ತಂಗಲ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರ್ ಸೇರಿದಂತೆ ಅನೇಕ ನಾಯಕರು ಭಾಗಿಯಾದರು.
ಪ್ರಿಯಾಂಕಾಗೆ ನವ್ಯಾ ಹರಿದಾಸ್ ಎದುರಾಳಿ: ಪ್ರಿಯಾಂಕಾ ಗಾಂಧಿ ಎಲ್ಡಿಎಫ್ ಸತ್ಯನ್ ಮೊಕರಿ ಮತ್ತು ಬಿಜೆಪಿ ಅಭ್ಯರ್ಥಿ ನವ್ಯ ಹರಿದಾಸ್ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಮೊಕರಿ ಕೋಯಿಕ್ಕೊಡ್ ಜಿಲ್ಲೆಯ ನದಪುರಮ್ನ ಮಾಜಿ ಶಾಸಕರಾಗಿದ್ದು, ಕೃಷಿ ವಲಯದಲ್ಲಿ ಸಮಸ್ಯೆಗಳನ್ನು ಗಮನ ಸೆಳೆಯುವ ಮೂಲಕ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಹರಿದಾಸ್ ಕೂಡ ಕೋಯಿಕ್ಕೊಡ್ ಕಾರ್ಪೊರೇಷನ್ನಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಈ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಇದೆ ವೇಳೆ, ಅವರು ರಾಯ್ ಬರೇಲಿಯಲ್ಲಿಯೂ ಗೆಲುವು ಕಂಡಿದ್ದರು. ಈ ಹಿನ್ನೆಲೆ ವಯನಾಡು ಕ್ಷೇತ್ರಕ್ಕೆ ರಾಜೀನಾಮೆಯನ್ನು ನೀಡಿದ್ದು, ಇದೀಗ ಅವರ ಸಹೋದರಿ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಲ್ಲಿನ ಜನರು ತಮ್ಮನ್ನು ಆಶೀರ್ವದಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ವಯನಾಡು ಉಪ ಚುನಾವಣೆಗೆ ಇದೆ ನವೆಂಬರ್ 13ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ: ವಯನಾಡು ಉಪಚುನಾವಣೆ: ನಾಮಪತ್ರ ಸಲ್ಲಿಕೆಗೆ ಮುನ್ನ ಸ್ಥಳೀಯರನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ