ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿ ಲೋಕಸಭೆ ಕ್ಷೇತ್ರದಲ್ಲಿ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಅಚ್ಚರಿ ಎಂದರೆ, ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವುದೇ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿಲ್ಲ. ಆದ್ದರಿಂದ ಸ್ಥಳೀಯ ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ನಡುವೆ ನೇರ ಹಣಾಹಣಿಗೆ ಕ್ಷೇತ್ರವು ಸಾಕ್ಷಿಯಾಗಲಿದೆ. ಇದೇ ವೇಳೆ, ಕಮಲ ಪಾಳಯವು ಚುನಾವಣೆಯಲ್ಲಿ ಯಾರಿಗೆ ಬೆಂಬಲ ಕೊಡುತ್ತದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.
''ಅನಂತನಾಗ್-ರಾಜೌರಿ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಪಕ್ಷದ ನಾಯಕತ್ವ ನಿರ್ಧರಿಸಿದೆ. ಇದರ ಜೊತೆಗೆ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬುದನ್ನೂ ಪಕ್ಷದ ಉನ್ನತ ನಾಯಕರೇ ತೀರ್ಮಾನಿಸುತ್ತಾರೆ'' ಎಂದು ಜಮ್ಮು-ಕಾಶ್ಮೀರದ ಬಿಜೆಪಿಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ 'ಈಟಿವಿ ಭಾರತ್'ಗೆ ತಿಳಿಸಿದರು.
ಬಾರಾಮುಲ್ಲಾ ಮತ್ತು ಶ್ರೀನಗರ ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಏಕೆಂದರೆ, ಈ ಎರಡು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಯಾವುದೇ ಕಾರ್ಯಕರ್ತರು ಇಲ್ಲ ಮತ್ತು ಬೆಂಬಲವಿಲ್ಲ. ಆದರೆ, ಅನಂತನಾಗ್-ರಜೌರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ಮಾತ್ರ ಜಮ್ಮು ಮತ್ತು ಕಾಶ್ಮೀರದ ಕಮಲ ಪಕ್ಷದ ನಾಯಕರನ್ನು ಕಂಗೆಡಿಸಿದೆ. ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಿದ ನಂತರ ಪಹಾಡಿ ಸಮುದಾಯದ ಅನೇಕರು ಬಿಜೆಪಿಗೆ ಬೆಂಬಲ ಸೂಚಿಸಿ, ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ, ಪಹಾಡಿ ಮೀಸಲಾತಿಯು ಗುಜ್ಜರ್ ಸಮುದಾಯವನ್ನು ಕೆರಳಿಸಿದೆ. ಈಗ ಬಿಜೆಪಿ ವಿರುದ್ಧ ಗುಜ್ಜರ್ಗಳು ಪ್ರಚಾರ ಸಹ ಮಾಡುತ್ತಿದ್ದಾರೆ.
ಇದರ ನಡುವೆ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ದೆಹಲಿಯ ನಾಯಕರಿಗೆ ಜಮ್ಮು-ಕಾಶ್ಮೀರು ನಾಯಕರು ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು. ಆದರೂ, ಇದಕ್ಕೆ ದೆಹಲಿಯ ನಾಯಕತ್ವ ಒಪ್ಪಲಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೇ ವಿಚಾರವಾಗಿ ಚುಟುಕಾಗಿ ಪ್ರತಿಕ್ರಿಯಿಸಿದ ಅಶೋಕ್ ಕೌಲ್, "ನಮ್ಮ ನಾಯಕತ್ವವು ಈ ಕ್ಷೇತ್ರವನ್ನು ಏಕೆ ಖಾಲಿ ಬಿಟ್ಟಿದೆ ಎಂದರೆ, ನಾವು ಏನು ಹೇಳಲು ಸಾಧ್ಯ'' ಎಂದು ಮರುಪ್ರಶ್ನಿಸಿದರು.
ಒಮರ್ ಅಬ್ದುಲ್ಲಾ ಲೇವಡಿ: ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಕೇಸರಿ ಪಡೆ ಬಗ್ಗೆ ಲೇವಡಿ ಮಾಡಿದ್ದಾರೆ. ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''2019ರ ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎಲ್ಲ ಆರು ಸ್ಥಾನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಗೃಹ ಸಚಿವ ಅಮಿತ್ ಶಾ ಅವರು ಮೊದಲು ಜಮ್ಮು ಮತ್ತು ಕಾಶ್ಮೀರದ ಜನರ ಹೃದಯವನ್ನು ಗೆಲ್ಲುತ್ತೇವೆ. ನಂತರ ಕಾಶ್ಮೀರದಲ್ಲಿ ಚುನಾವಣೆಯನ್ನು ಶಂಕುಸ್ಥಾಪನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಂದರೆ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಬಿಜೆಪಿ ಜನರ ಹೃದಯ ಗೆಲ್ಲಲು ವಿಫಲವಾಗಿದೆ'' ಎಂದು ಕುಟುಕಿದರು.