ಬಿಲಾಸ್‌ಪುರ: ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಬಿಲಾಸ್‌ಪುರ ಹೈಕೋರ್ಟ್ ತನ್ನ ತೀರ್ಪಿನಲ್ಲಿ ‘‘ಒಂದೇ ಸೂರಿನಡಿ ಒಟ್ಟಿಗೆ ವಾಸಿಸುತ್ತಿದ್ದರೂ, ಯಾವುದೇ ಕಾರಣವಿಲ್ಲದೆ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಪತ್ನಿ ವಾಸವಾಗಿರುವುದು ಪತಿಗೆ ಮಾನಸಿಕ ಹಿಂಸೆಯಾಗುತ್ತದೆ’’ ಎಂದು ಹೇಳಿದೆ.
ಬೆಮೆತಾರಾ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಂಡ ವಿಭಾಗೀಯ ಪೀಠ, ತನ್ನ ಪತ್ನಿಯೊಂದಿಗೆ ಸಾಕಷ್ಟು ಸಮಯದಿಂದ ಜಗಳವಾಡಿದ್ದ ವ್ಯಕ್ತಿಗೆ ವಿಚ್ಛೇದನ ಕರುಣಿಸಿದೆ. ಸಮಸ್ಯೆಯನ್ನು ಪರಿಹರಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಪತ್ನಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಮಹಿಳೆಯ ವರ್ತನೆಯಿಂದ ದಂಪತಿ ಒಟ್ಟಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಮದುವೆಯಾದ ತಕ್ಷಣ ಪತ್ನಿ ಸಣ್ಣಪುಟ್ಟ ವಿಷಯಗಳಿಗೆ ಪತಿಯೊಂದಿಗೆ ಜಗಳವಾಡಿಕೊಂಡಿದ್ದನ್ನು ಹೈಕೋರ್ಟ್ ಗಮನಿಸಿದೆ. ಮನೆಯವರು ಸಾಕಷ್ಟು ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರು. ಮಹಿಳೆಯು ಹಠ ಸಡಿಲಿಸದ ಕಾರಣ ಅವರ ಸಂಧಾನ ವ್ಯರ್ಥವಾಗುತ್ತಿತ್ತು.
ದಿನ ಕಳೆದಂತೆ, ದಂಪತಿ ಹೆಚ್ಚೆಚ್ಚು ಜಗಳವಾಡುತ್ತಿದ್ದರು. ಇದು ಕುಟುಂಬ ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿತು. ಕೊನೆಗೆ ಕುಟುಂಬ ಸದಸ್ಯರು ತಮ್ಮ ಸಮಾಜದ ಸಭೆಗೆ ಕರೆದರು. ಪತಿ ಮತ್ತು ಪತ್ನಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸಲು ಆರಂಭಿಸಿದ ನಂತರ ಅಲ್ಲಿ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗಲಿಲ್ಲ.