ಪಾಟ್ನಾ (ಬಿಹಾರ): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಹೊಸ ಸರ್ಕಾರದ ರಚನೆಯ ಹೋರಾಟ ಆರಂಭವಾಗಿದೆ. ಇಂದು ದೆಹಲಿಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ನಿತೀಶ್ ಕುಮಾರ್ ಎನ್‌ಡಿಎ ಸಭೆಯಲ್ಲಿ ಭಾಗವಹಿಸುವವರಿದ್ದರೆ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಐಎನ್ಡಿಎಐ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸುವವರಿದ್ದಾರೆ. ಆದರೆ ಇಬ್ಬರೂ ಒಂದೇ ವಿಮಾನದಲ್ಲಿ ಪಾಟ್ನಾದಿಂದ ದೆಹಲಿಗೆ ಪ್ರಯಾಣ ಬೆಳೆಸಿರುವುದು ಅಚ್ಚರಿ ಮೂಡಿಸಿದೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಅವರು ಪಾಟ್ನಾದಿಂದ ದೆಹಲಿಗೆ ತೆರಳಿದ್ದಾರೆ. ಇವರ ಜೊತೆಗೆ ವಿಮಾನದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಕಾಣಿಸಿಕೊಂಡಿದ್ದಾರೆ. ಒಂದೇ ವಿಮಾನದಲ್ಲಿ ಜೊತೆಗೆ ಪ್ರಯಾಣಿಸುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಸಂಜೆ 4:30ಕ್ಕೆ ಎನ್‌ಡಿಎ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಎನ್‌ಡಿಎಯ ಎಲ್ಲಾ ಘಟಕಗಳ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಮಂಗಳವಾರ ಸಿಎಂ ನಿತೀಶ್ ಕುಮಾರ್ ಜತೆ ಪ್ರಧಾನಿ ದೂರವಾಣಿಯಲ್ಲಿ ಮಾತನಾಡಿದರು.
ಹೊಸ ಸರ್ಕಾರ ರಚನೆಗೆ ಪ್ರಯತ್ನ ಆರಂಭ: ಹೊಸ ಸರ್ಕಾರ ರಚನೆಗೆ ನಡೆಯುತ್ತಿರುವ ಪ್ರಯತ್ನಗಳತ್ತ ಎಲ್ಲರ ಕಣ್ಣು ನೆಟ್ಟಿದೆ. ಇಂದಿನಿಂದ ಈ ಬಗ್ಗೆ ದೆಹಲಿಯಲ್ಲಿ ಸಂಚಲನ ಉಂಟಾಗಲಿದೆ. ಏಕೆಂದರೆ ಇಂಡಿಯಾ ಒಕ್ಕೂಟದಿಂದಲೂ ಸಭೆ ಕರೆಯಲಾಗಿದೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ ಬಿಜೆಪಿ ಮಿತ್ರಪಕ್ಷಗಳ ಬೆಂಬಲ ಪಡೆಯಬೇಕಿದೆ. ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ 30 ಸ್ಥಾನಗಳನ್ನು ಗೆದ್ದಿದೆ. 2019ಕ್ಕೆ ಹೋಲಿಸಿದರೆ 9 ಸ್ಥಾನಗಳ ಕಳೆದುಕೊಂಡಿವೆ.