ಕರ್ನಾಟಕ

karnataka

ETV Bharat / bharat

ಬೀದರ್ ದರೋಡೆ ಪ್ರಕರಣ: ಬೀದರ್, ಅಫ್ಜಲ್‌ಗಂಜ್‌ನಲ್ಲಿ ಬಳಸಲಾದ ಬೈಕ್ ಪತ್ತೆ!; ದರೋಡೆಕೋರರು ಬಿಹಾರಕ್ಕೆ ಪರಾರಿ ಶಂಕೆ - ATM MONEY HEIST

ಬೀದರ್ ಎಟಿಎಂ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಕೃತ್ಯ ಎಸಗಿದ ಖದೀಮರು, ಹೈದರಾಬಾದ್​ ಮೂಲಕ ಬಿಹಾರಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ATM MONEY HEIST: Bike used in Bidar and Afzalganj seized, POlice suspect Assilants fled to Bihar
ಸಿಸಿಟಿವಿಯಲ್ಲಿ ಪತ್ತೆಯಾದ ದರೋಡೆಕೋರರು (ETV Bharat)

By ETV Bharat Karnataka Team

Published : Jan 23, 2025, 5:54 PM IST

ಹೈದರಾಬಾದ್: ಬೀದರ್​ನಲ್ಲಿ ಗುಂಡಿನ ದಾಳಿ ನಡೆಸಿ, ಹಣ ದೋಚಿ ಬೈಕ್​ ಮೂಲಕ ಪರಾರಿಯಾಗಿರುವ ಆರೋಪಿಗಳ ಬೆನ್ನುಬಿದ್ದಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ದರೋಡೆಕೋರರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅವರ ಬಂಧನಕ್ಕೆ ಹಗಲಿರುಳು ಹುಡುಕಾಟ ನಡೆಸುತ್ತಿವೆ.

ಹುಡುಕಾಟ ಮತ್ತು ತನಿಖಾದ ಮುಂದುವರೆದ ಭಾಗವಾಗಿ ದಾಳಿಕೋರರು ಅಂದು ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ. ಈ ಬೈಕ್​​​ ಕದ್ದಿದ್ದಲ್ಲದೇ ಬೀದರ್‌ನಲ್ಲಿ ನಡೆದ ದರೋಡೆಗೂ ಅದನ್ನು ಬಳಸಲಾಗಿದೆ ಎಂಬ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಆರೋಪಿಗಳು ಅದೇ ಬೈಕ್‌ನಲ್ಲಿ ಬೀದರ್‌ನಿಂದ ಪರಾರಿಯಾಗಿ ಹೈದರಾಬಾದ್‌ಗೆ ಬಂದಿದ್ದು, MGBS ಪಾರ್ಕಿಂಗ್ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಬೀದರ್ ನಗರದ ಜನನಿಬಿಡ ಪ್ರದೇಶದಕ್ಕೆ ಅಂದು ಬೈಕ್​ನಲ್ಲಿ ಬಂದ ಇಬ್ಬರು ದರೋಡೆಕೋರರು, ಎಟಿಎಂಗೆ ಹಣ ತುಂಬುವ ಎಜೆನ್ಸಿ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವನನ್ನು ಹತ್ಯೆಮಾಡಿ ಭಾರೀ ಮೊತ್ತದೊಂದಿಗೆ ಹೈದರಾಬಾದ್​ಗೆ ಬಂದಿದ್ದರು. ಹೈದರಾಬಾದ್‌ ಕಡೆ ಪ್ರಯಾಣ ಬೆಳೆಸಿದ ಇವರು, ಇಲ್ಲಿಯ ಬಸ್ ನಿಲ್ದಾಣದಲ್ಲಿ ತಾವು ತಂದ ಬೈಕ್ ನಿಲ್ಲಿಸಿ ಖಾಸಗಿ ಟ್ರಾವೆಲ್​ ಬಸ್​ ಮೂಲಕ ರಾಯ್‌ಪುರಕ್ಕೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಈ ವೇಳೆ ಟ್ರಾವೆಲ್​ ಮ್ಯಾನೇಜರ್ ವಿಚಾರಿಸುತ್ತಿದ್ದಂತೆ ಭಯಗೊಂಡ ದರೋಡೆಕೋರರು, ಏಕಾಏಕಿ ಅವರ ಮೇಲೆ ಗುಂಡು ಹಾರಿಸಿ ಅಲ್ಲಿಂದ ಮತ್ತೆ ಪರಾರಿಯಾಗಿದ್ದಾರೆ. ಹಣದೊಂದಿಗೆ ಓಡಾಡುತ್ತಿರುವ ದರೋಡೆಕೋರರು, ಹೈದರಾಬಾದ್​ನಿಂದ ಬಿಹಾರಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೀದರ್​​​​​​​​​ನಲ್ಲಿ ಸಿನಿಮಾ ಸ್ಟೈಲ್​​​ನಲ್ಲಿ ದರೋಡೆ : ಗುಂಡಿನ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಸಾವು, 93 ಲಕ್ಷ ದೋಚಿ ದುಷ್ಕರ್ಮಿಗಳು ಎಸ್ಕೇಪ್​​

ಬೀದರ್‌ನಲ್ಲಿ ಏನಾಯಿತು?:ವಾರದ ಹಿಂದೆ (ಜ.16) ಬೀದರ್ ನಗರದ ಎಸ್​ಬಿಐ ಕಚೇರಿ ಎದುರು ಎಟಿಎಂಗೆ ಹಣ ತುಂಬಲು ಬಂದಿದ್ದ ಏಜೆನ್ಸಿ ವಾಹನವನ್ನು ಇಬ್ಬರು ದರೋಡೆಕೋರರು ಬೈಕ್​​ನಲ್ಲಿ ಹಿಂಬಾಲಿಸಿಕೊಂಡು ಬಂದು ಏಕಾಏಕಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಗುಂಡು ಹಾರಿಸಿ 93 ಲಕ್ಷ ಹಣವಿದ್ದ ಬ್ಯಾಗ್​ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ನಗರದ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ SBI ಬ್ಯಾಂಕ್ ಮೇನ್ ಬ್ರ್ಯಾಂಚ್ ಮುಂದೆಯೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಗುಂಡು ಹಾರಿಸಿದ್ದರಿಂದ ಗಿರೀಶ್ ಎಂಬ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಶಿವಕುಮಾರ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಬ್ಯಾಂಕಿನ ಕಚೇರಿ ಎದುರು ಅಂದು ಗಿರೀಶ್ ಮೃತದೇಹ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

ABOUT THE AUTHOR

...view details