ಗುವಾಹಟಿ:ಶೇಖ್ ಹಸೀನಾ ಅವರ ಪಲಾಯನದ ಬಳಿಕ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭಾರತ-ಬಾಂಗ್ಲಾ ಗಡಿಯ ಮೂಲಕ ಅಸ್ಸೋಂಗೆ ಪ್ರವೇಶಿಸಲು ಯತ್ನಿಸಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ಒಳನುಸುಳುವಿಕೆಯನ್ನು ಅಸ್ಸೋಂ ಪೊಲೀಸರು ತಡೆದಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೋತಿಯುರ್ ಶೇಖ್, ಮುಶಿಯರ್ ಮೊಲ್ಲಾ, ತಾನಿಯಾ ಮೊಲ್ಲಾ ಮತ್ತು ರೀಟಾ ಮೊಲ್ಲಾ ಅಸ್ಸೋಂಗೆ ನುಸುಳಲು ಯತ್ನಿಸಿದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೆಂದು ತಿಳಿದು ಬಂದಿದೆ.
'ಅಸ್ಸೋಂ-ಬಾಂಗ್ಲಾದೇಶ ಗಡಿಯ ಮೂಲಕ ಕರೀಂಗಂಜ್ ಜಿಲ್ಲೆಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಾದ ಮೋತಿಯುರ್ ಸೇಖ್, ಮುಶಿಯಾರ್ ಮುಲ್ಲಾ, ತಾನಿಯಾ ಮುಲ್ಲಾ ಮತ್ತು ರೀಟಾ ಮುಲ್ಲಾ ಅವರ ಅಕ್ರಮ ಪ್ರವೇಶವನ್ನು ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಕರೀಂಗಂಜ್ ಪೊಲೀಸರು ತಡೆದಿದ್ದಾರೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ 'ಎಕ್ಸ್' ಖಾತೆಯಲ್ಲಿ ತಿಳಿಸಿದ್ದಾರೆ.
ದೂರವಾಣಿ ಮೂಲಕ ಈಟಿವಿ ಭಾರತದ ಜೊತೆ ಮಾತನಾಡಿದ ಕರೀಂಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥಪ್ರತಿಮ್ ದಾಸ್, 'ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಕರೀಂಗಂಜ್ ಸೆಕ್ಟರ್ ಮೂಲಕ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಪೊಲೀಸರು ಅವರನ್ನು ಝೀರೋ ಪಾಯಿಂಟ್‌ನಲ್ಲಿ ಗುರುತಿಸಿದ್ದು, ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಅವರು ಬಾಂಗ್ಲಾದೇಶಿ ಪ್ರಜೆಗಳೆಂದು ಗೊತ್ತಾಗಿದೆ. ಕೂಡಲೇ ಅವರನ್ನು ಭಾರತಕ್ಕೆ ಪ್ರವೇಶಿಸದಂತೆ ತಡೆದು ಬಾಂಗ್ಲಾದೇಶ ಪೊಲೀಸರನ್ನು ಸಂಪರ್ಕಿಸಿ ವಾಪಸ್ ಕಳುಹಿಸಲಾಯಿತು' ಎಂದಿದ್ದಾರೆ.
ಅವರು ಭಾರತವನ್ನು ಪ್ರವೇಶಿಸಲು ಏಕೆ ಬಂದಿದ್ದಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗಳ ಪಾರ್ಥಪ್ರತಿಮ್ ದಾಸ್ ಉತ್ತರಿಸಲಿಲ್ಲ.
ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಉದ್ವಿಗ್ನತೆಯಿಂದ ದೇಶ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಭಾರತದೊಳಗೆ ನುಸುಳಲು ಯತ್ನಿಸಿಪದ್ದ 11 ಬಾಂಗ್ಲಾದೇಶೀಯರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾನುವಾರ ಬಂಧಿಸಿದೆ. ಬಿಎಸ್‌ಎಫ್ ಮಾಧ್ಯಮಗಳಲ್ಲಿ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅವರು ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮೇಘಾಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಗಡಿ ಪ್ರದೇಶಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಹಿಂಸಾಚಾರ: 12 ಕೈದಿಗಳ ಹತ್ಯೆ, ಜೈಲಿನಿಂದ ನೂರಾರು ಮಂದಿ ಪರಾರಿ! - Bangladesh crisis