ನವದೆಹಲಿ: ರಾಷ್ಟ್ರ ರಾಜಧಾನಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ. ಇಂದು ಬಿಜೆಪಿಯ 48 ನೂತನ ಶಾಸಕರ ಸಭೆ ನಡೆಯಲಿದ್ದು, ಇದರಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ.
ಬಳಿಕ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗುವುದು. ವಿನೋದ್ ತಾವ್ಡೆ ಮತ್ತು ಪ್ರಮಾಣ ವಚನ ಸಮಾರಂಭದ ಉಸ್ತುವಾರಿ ತರುಣ್ ಚುಗ್ ಅವರಲ್ಲದೇ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಇತರ ಬಿಜೆಪಿ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಫೆಬ್ರವರಿ 20ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಿನ್ನೆ ಸಂಜೆ ದೆಹಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಭೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ತರುಣ್ ಚುಗ್ ಮತ್ತು ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿ ಜನತೆಯನ್ನು ಆಹ್ವಾನಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದ ಅರ್ಚಕರಿಂದ ಹಿಡಿದು ದೆಹಲಿಯ ಎಲ್ಲ ಪ್ರದೇಶಗಳ 250 ವಿಸ್ತಾರಕ್‌ಗಳಿಗೂ ಆಹ್ವಾನ ನೀಡಲಾಗಿದೆ.
ಮುಖ್ಯಮಂತ್ರಿಗೆ ಸ್ಥಾನಕ್ಕೆ ಚರ್ಚೆ: ಚುನಾವಣಾ ಫಲಿತಾಂಶ ಹೊರಬಿದ್ದ ದಿನದಿಂದಲೂ ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ. ಮುಖ್ಯಮಂತ್ರಿಗಳ ಹೆಸರುಗಳ ಚರ್ಚೆಯಲ್ಲಿ ಪ್ರವೇಶ್ ವರ್ಮಾ, ಸತೀಶ್ ಉಪಾಧ್ಯಾಯ, ಆಶಿಶ್ ಸೂದ್, ಜಿತೇಂದ್ರ ಮಹಾಜನ್, ವಿಜೇಂದ್ರ ಗುಪ್ತಾ, ಅಭಯ್ ವರ್ಮಾ ಮತ್ತು ಮಹಿಳೆಯರಲ್ಲಿ ರೇಖಾ ಗುಪ್ತಾ ಮತ್ತು ಶಿಖಾ ರೈ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಈ ಊಹಾಪೋಹಗಳಿಗೆ ಇಂದು ತೆರೆ ಬೀಳಲಿದ್ದು, ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ. ಈ ಹೆಸರುಗಳ ಹೊರತಾಗಿ ಬೇರಾವುದೇ ಮುಖವನ್ನು ಮುಖ್ಯಮಂತ್ರಿ ಎಂದು ಘೋಷಿಸಿ ಬಿಜೆಪಿ ಅಚ್ಚರಿ ಮೂಡಿಸಲೂಬಹುದು. ಬಿಜೆಪಿ ಹೈಕಮಾಂಡ್ ಅಚ್ಚರಿಯ ಆಯ್ಕೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಹಾಗಾಗಿ ಹೆಸರು ಪ್ರಕಟವಾಗುವವರೆಗೂ ಇಂತಹವರೇ ಸಿಎಂ ಆಗಲಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹೀಗಾಗಿಯೇ ದೆಹಲಿ ಜನರ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ಆಪ್ ಕೆಡವಿ ದೆಹಲಿ ಗದ್ದುಗೆ ಏರಿದ ಬಿಜೆಪಿ : ಬಲ ಕಳೆದುಕೊಂಡ ವಿಪಕ್ಷಗಳ INDIA ಮೈತ್ರಿಕೂಟ