ವೈಶಾಲಿ: ಬಿಹಾರದ ವೈಶಾಲಿ ಜಿಲ್ಲೆಯ ಮಧುರಾಪುರ ಇದೀಗ ಎಲ್ಲರನ್ನು ತಿರುಗಿ ನೋಡುವಂತೆ ಮಾಡಿರುವ ಮಾದರಿ ಹಳ್ಳಿಯಾಗಿದೆ. ಈ ಗ್ರಾಮದ ಯಶೋಗಾಥೆ ಹಿಂದೆ ಇರುವುದು ಮಹಿಳೆಯರ ಶ್ರಮವೇ ಹೊರತು ಆಡಳಿತ ಅಥವಾ ಸರ್ಕಾರದ್ದಂತೂ ಅಲ್ಲ. ಈ ಮಹಿಳೆಯರ ಸಾಹಸ ಇದೀಗ ಮಕ್ಕಳಿಗೆ ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಲಾಗಿದೆ. ಅಷ್ಟಕ್ಕೂ ಈ ಗ್ರಾಮದ ಮಹಿಳೆಯರು ಮಾಡಿರುವ ಕೆಲಸ ಏನು ಎಂಬ ಕುರಿತು ಮಾಹಿತಿ ಇಲ್ಲಿದೆ.
ವೈಶಾಲಿಯ ಮಧುರಾಪುರ: ವೈಶಾಲಿ ಜಿಲ್ಲೆಯ ಬಿದುಪುರ ಬ್ಲಾಕ್‌ನ ಮಧುರಾಪುರ ಗ್ರಾಮದ ಬದಲಾವಣೆಯಲ್ಲಿ ಇಲ್ಲಿನ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದುದು. ಪಶುಸಂಗೋಪನೆಗೆ ಹೆಸರಾಗಿರುವ ಈ ಗ್ರಾಮದ ಶೇ 80ರಷ್ಟು ಮಹಿಳೆಯರು ಇದೇ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರು ಸಾಕಾಣಿಕೆ. ಹಾಲು ಕರೆಯುವುದು, ಸಮಿತಿಗೆ ಹಾಲು ಹಾಕುವುದು. ಮಾರಾಟ ಮಾಡುವುದು ಎಲ್ಲವನ್ನು ಇಲ್ಲಿ ಮಹಿಳೆಯರೇ ನಿಭಾಯಿಸುತ್ತಾರೆ.

ಸುಮನ್ ದೇವಿ ಪ್ರೇರಣೆ: ಮಹಿಳೆಯರು ಈ ರೀತಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣವಾಗಿದ್ದು ಸುಮನ್ ದೇವಿಯ ಎಂಬ ಮಹಿಳೆ. 38 ವರ್ಷದ ಹಿಂದೆ ಸುಮನ್ ದೇವಿ ಒಂದು ಹಸು ತೆಗೆದುಕೊಂಡು ಅದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣದಲ್ಲಿ ಮನೆ ನಿಭಾಯಿಸುವುದು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತಿತ್ತು.

ಹೀಗೆ ಒಂದು ದಿನ ಮನೆಯ ಬಾಗಿಲಲ್ಲಿ ಹಸುವನ್ನು ನೋಡುತ್ತಿದ್ದ ಸುಮನ್ಗೆ ತಾನೇಕೆ ಡೈರಿ ತೆರೆಯಬಾರದು ಎಂಬ ಉಪಾಯ ಬಂದಿತು. ಇದನ್ನು ಗಂಡ ಮತ್ತು ಅತ್ತೆಗೆ ಹೇಳಿದರು. ಅಷ್ಟೇ ಅಲ್ಲದೇ, ಇದಕ್ಕಾಗಿ ಗ್ರಾಮದ ಮಹಿಳೆಯರನ್ನು ಒಟ್ಟುಗೂಡಿಸಿ, ಚರ್ಚಿಸಿದಳು. ಇವರ ಈ ಆಲೋಚನೆಗೆ ಅನೇಕ ಮಹಿಳೆಯರು ಇದು ಹೇಗೆ ಸಾಧ್ಯ ಎಂದು ನಿರಾಸಕ್ತಿ ತೋರಿದ್ದೇ ಹೆಚ್ಚು.

1987 ಡೈರಿ ಪ್ರಾರಂಭ: ಗ್ರಾಮದ ಮಹಿಳೆಯರ ನಿರಾಸಕ್ತಿಯಿಂದ ಎದೆಗುಂದದ ಸುಮನ್ ಕುಟುಂಬದ ಬೆಂಬಲ ಪಡೆದು ಮುನ್ನುಗ್ಗಿದರು. ಪರಿಣಾಮವಾಗಿ 1987ರ ಜನವರಿ 24ರಂದು ಮಧುರಾಪುರ ಮಹಿಳಾ ಹಾಲು ಉತ್ಪಾದನಾ ಸಹಾಯಕ ಸಮಿತಿ ಎಂಬ ಸಹಕಾರಿ ಸಂಘವನ್ನು (ಡೈರಿ) ಸ್ಥಾಪಿಸಿದರು. ಇದಕ್ಕೆ ಮೊದಲು ಡೈರಿ ನಡೆಸಲು ಒಂದು ತಿಂಗಳ ತರಬೇತಿ ಕೂಡಾ ಪಡೆದುಕೊಂಡರು. ಆರಂಭದಲ್ಲಿ 10 ಮಹಿಳೆಯರು ಸಹಕಾರಿ ಸಂಘಕ್ಕೆ ಸೇರ್ಪಡೆಯಾದರು.

ಇಂದು ಗರ್ವದಿಂದ ಹೇಳಿಕೊಳ್ಳುತ್ತಿರುವ ಜನರು: ಈ ಪ್ರಯಾಣ ಸುಲಭವಾಗಿರಲಿಲ್ಲ. ಸಮಾಜದಲ್ಲಿ ಟೀಕೆಗಳನ್ನು ಒಳಿತು ಮತ್ತು ಕೆಡುಕನ್ನು ಕಂಡು ನಾನು ಇದರಲ್ಲಿ ಮುನ್ನುಗಿದೆ. ಇದೀಗ ಸಮಾಜದ ಜನರು ನನ್ನನ್ನು ಗೌರವದಿಂದ ಕಾಣುತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ 70 ವರ್ಷದ ಸುಮನ್. ಆರಂಭದಲ್ಲಿ ಅಳುಕು ಇದ್ದರೂ ನಿಧಾನಕ್ಕೆ ಮಹಿಳೆಯರು ಡೈರಿಗೆ ಸೇರಲು ಮುಂದಾದರು. ಅಷ್ಟೇ ಅಲ್ಲದೆ ಮಧುರಾಪುರದ ಸೇರಿದಂತೆ ಸುತ್ತಮುತ್ತಲಿನ ಅನೇಕ ಮಹಿಳೆಯರಿಗೂ ಕೂಡ ಈ ಕುರಿತು ತರಬೇತಿ ನೀಡಿ ಜಾಗೃತಿ ಮೂಡಿಸಿದರು.

ನಿಧಾನಕ್ಕೆ ಜನರು ತಮ್ಮ ಡೈರಿಗೆ ಹಾಲು ಹಾಕಲು ಪ್ರಾರಂಭಿಸಿದರು. ಆರಂಭದಲ್ಲಿ ನಾವು ಮಧುರಾಪುರದಲ್ಲಿ ಸಂಗ್ರಹಿಸಿದ ಹಾಲನ್ನು ಹಾಜಿಪುರಕ್ಕೆ ಒಯ್ಯತ್ತಿದ್ದೆವು . ಇಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಹಾಲು ಕೊಂಡು ಅದನ್ನು ಪಾಟ್ನಾದಲ್ಲಿ ಲಾಭದಾಯಕ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನುತ್ತಾರೆ ಸುಮನ್

10 ಮಂದಿಯಿಂದ ಆರಂಭ ಈಗ 500 ಮಹಿಳಯರು ಸ್ವಾವಲಂಬಿ: 10 ಮಹಿಳೆಯರ ಜೊತೆಗೆ ಆರಂಭವಾದ ಸುಮನ್ ದೇವಿ ಪ್ರಯಾಣದಲ್ಲಿ ಇದೀಗ ಮಧುರಾಪುರ ಹಾಗೂ ಸಮೀಪದ ಹಲವು ಗ್ರಾಮಗಳ 500ಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಮಧುರಾಪುರದ ಪ್ರತಿ ಮನೆಯಲ್ಲೂ ಎರಡ್ಮೂರು ಹಸುಗಳಿದ್ದು, ಅವು ಹೆಚ್ಚು ಲಾಭ ನೀಡುತ್ತಿವೆ. ಇದೀಗ ಪಾಟ್ನಾ ಡೈರಿಗೆ ಪ್ರತಿದಿನ 2000 ಲೀಟರ್‌ಗೂ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದೇವೆ.

ಈ ಕುರಿತು ಮಾತನಾಡಿರುವ ಗ್ರಾಮದ 68 ವರ್ಷದ ಮಹಿಳೆ ಶಾರದಾ ದೇವಿ, ಜಾನುವಾರುಗಳ ಸಾಕಣೆಯಿಂದ ಹಿಡಿದು, ಕೇಂದ್ರಕ್ಕೆ ಹಾಲು ತೆಗೆದುಕೊಂಡು ಹೋಗುವವರೆಗೂ ಎಲ್ಲ ಕಾರ್ಯವನ್ನು ನಾನೇ ನಿಭಾಯಿಸುತ್ತಿದ್ದೇನೆ. ಹಿಂದೆ ಮಹಿಳೆಯರಿಗೆ ಮನೆಯಿಂದ ಹೊರ ಬರಲು ಅವಕಾಶವಿರಲಿಲ್ಲ. ಇದೀಗ ಹಾಲು ಮಾರಿದರೆ ಬೋನಸ್ ಸಿಗುತ್ತದೆ. ಅಲ್ಲದೇ ಹಸುವಿಗೆ ಮೇವು, ಲಸಿಕೆ ಹಾಕುವ ವ್ಯವಸ್ಥೆಯೂ ಇದೆ. ಇಂದು 500 ಮಹಿಳೆಯರು ಈ ಡೈರಿಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಲಾಭ ಪಡೆಯುತ್ತಿರುವ ಗ್ರಾಮಸ್ಥರು: 55 ವರ್ಷದ ಸವಿತಾ ದೇವಿ ಮಾತನಾಡಿ, ಕಳೆದ 10 ವರ್ಷಗಳಿಂದ ಡೈರಿಗೆ ಹಾಲು ಹಾಕುತ್ತಿದ್ದು, ಲಾಭ ಪಡೆಯುತ್ತಿದ್ದೇವೆ. ಮೊದಲಿಗೆ ಮಧ್ಯವರ್ತಿಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರಲಿಲ್ಲ. ಆದರೆ, ಇದೀಗ ಹೆಚ್ಚುವರಿಯಾಗಿ 20 ರಿಂದ 30 ಸಾವಿರ ಪಡೆಯುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆಗಳ ಪಠ್ಯದಲ್ಲಿ ಮಧುರಾಪುರ ಗ್ರಾಮದ ಪಾಠ: ಮಧುರಾಪುರದ ಈ ಬಿಳಿ ಕ್ರಾಂತಿ ಕಥೆ ಬಿಹಾರ ಸರ್ಕಾರಕ್ಕೆ ತಲುಪುತ್ತಿದ್ದಂತೆ ಈ ಬಗ್ಗೆ ಮೆಚ್ಚುಗೆ ಜೊತೆಗೆ ಮಹಿಳೆಯರ ಈ ಪ್ರೇರಣಾದಾಯಕ ಕಥೆಯನ್ನು ಮಕ್ಕಳ ಪಠ್ಯದಲ್ಲಿ ಅಳವಡಿಸಿಕೊಂಡಿದೆ . ಗ್ರಾಮದ ಮಕ್ಕಳು ಶಾಲೆಯಲ್ಲಿ ಓದುವಾಗ ತಮ್ಮ ಅಮ್ಮ, ಚಿಕ್ಕಮ್ಮಂದಿರ ಸಾಹಸದ ಕಥೆಗಳನ್ನು ಕೇಳಿ ಹೆಮ್ಮೆ ಪಡುತ್ತಿದ್ದಾರೆ.
ಅಜ್ಜಿಯ ಕಥೆ: ಮಧುರಾಪುರದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ನೇಹಾ, ಶಾಲಾ ಪುಸ್ತಕದಲ್ಲಿ ಅಜ್ಜಿಯ ಕಥೆಯನ್ನು ಓದಿ ತುಂಬಾ ಸಂತಸ ವ್ಯಕ್ತಪಡಿಸಿದ್ದಾಳೆ. 8 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸಹಕಾರ ಎಂಬ ಶೀರ್ಷಿಕೆಯ ಅಜ್ಜಿಯ ಕಥೆ ಇದೆ. ಇದರಲ್ಲಿ ಗ್ರಾಮದ ಮಹಿಳೆಯರು ಸಹಕಾರ ಸಂಘವನ್ನು ತೆರೆಯುವ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಹೇಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ತಿಳಿಸಲಾಗಿದೆ ಎಂದರು.
ಮೊಮ್ಮಕ್ಕಳಿಗೆ ಮಾದರಿಯಾದ ಅಜ್ಜಿಯರು: ಮಧುರಾಪುರ ಹಾಲು ಉತ್ಪನ್ನ ಸಹಕಾರ ಸಮಿತಿಯ ಕಥೆ ಮಕ್ಕಳೂ ಸ್ಪೂರ್ತಿ ಪಡೆದುಕೊಂಡಿದ್ದಾರೆ. ನಮಗೂ ಇದು ಹೆಮ್ಮೆಯ ವಿಚಾರ. ಮಧುರಾಪುರದ ಕಥೆ ಸರ್ಕಾರಿ ಶಾಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸಂಗತಿ ಎನ್ನುತ್ತಾರೆ ಶಿಕ್ಷಕಿ ಸಾಲ್ವಿ.
ಇದನ್ನೂ ಓದಿ: ಮಹಾಕುಂಭ ಮೇಳದ ಮುಕ್ತಾಯದ ದಿನಾಂಕ ವಿಸ್ತರಣೆ?: ಪ್ರಯಾಗ್‌ರಾಜ್ ಡಿಸಿ ಸ್ಪಷ್ಟನೆ ಹೀಗಿದೆ!
ಇದನ್ನೂ ಓದಿ: ಇಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿ ಹಸು ಸಾಕಣೆ: ಈಗ 6-8 ಕೋಟಿ ಮೊತ್ತದ ಕಂಪನಿಗೆ ಒಡೆಯ