ನಲ್ಗೊಂಡ (ತೆಲಂಗಾಣ) : ಪರಿಶಿಷ್ಟ ಜಾತಿಯ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಇತಿಹಾಸದಲ್ಲಿ ಒಂದೇ ಬಾರಿಗೆ ಇಷ್ಟೊಂದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಇದೇ ಮೊದಲು.
ನ್ಯಾಯಾಧೀಶೆ ರೋಜಾ ರಮಣಿ ಪಂಡಿತ್ ಅಜೀಂಪೇಟೆಯ ಬಟ್ಟ ಲಿಂಗಯ್ಯ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹತ್ಯೆ ಮಾಡಿರುವ ಅಪರಾಧಿಗಳೆಲ್ಲರೂ ಒಂದೇ ಗ್ರಾಮದವರಾಗಿದ್ದಾರೆ. ಜೀವಾವಧಿ ಶಿಕ್ಷೆಯಲ್ಲದೆ ತಲಾ 6 ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿದೆ.
ಅಪರಾಧಿಗಳ ಪಟ್ಟಿ ಹೀಗಿದೆ : ಪಂಡಿತ್ ರಾಮಸ್ವಾಮಿ, ಪಂಡಿತ್ ಸಾಯಲು, ಪಂಡಿತ್ ರಾಮುಲು, ಪಂಡಿತ್ ಮಲ್ಲೇಶ್, ಬಂದಗೊರ್ಲ ವಾಲ್ರಾಜ್, ಪಂಡಿತ್ ಯಾದಯ್ಯ, ಜಕ್ಕುಲ ರಮೇಶ್, ಪಂಡಿತ್ ಶ್ರೀಕಾಂತ್, ಪಂಡಿತ್ ಸತೀಶ್, ಪಂಡಿತ್ ನರಸಯ್ಯ, ಪಂಡಿತ್ ಸತ್ಯನಾರಾಯಣ, ಬಂದಗೊರ್ಲ ನಾಗಮ್ಮ, ಪಂಡಿತ್ ಶ್ರೀನು, ಪಂಡಿತ್ ಮಲ್ಲಯ್ಯ, ಪಂಡಿತ್ ಲಿಂಗಯ್ಯ, ಜಕ್ಕುಲ ಲಚ್ಚಯ್ಯ ಮತ್ತು ಪೋಲಬೋಯನ ಲಿಂಗಯ್ಯ.
ದ್ವೇಷದ ಹಿನ್ನೆಲೆ ಕೊಲೆ : ಪ್ರಾಸಿಕ್ಯೂಷನ್ ಪ್ರಕಾರ ಹತ್ಯೆಗೀಡಾದ ಬಟ್ಟ ಲಿಂಗಯ್ಯ ಈ ಹಿಂದೆ ಅಜೀಂಪೇಟೆಯ ಪಂಡಿತ್ ರಾಜಮಲ್ಲು ಕೊಲೆ ಪ್ರಕರಣದ ಆರೋಪಿ. ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಇದೇ ದ್ವೇಷದ ಸೇಡಿಗೆ 2017ರಲ್ಲಿ ಬಟ್ಟ ಲಿಂಗಯ್ಯನ ಕೊಲೆ ನಡೆದಿತ್ತು.
ಪ್ರಕರಣದ ವಿವರ : ದಸರಾ ನಿಮಿತ್ತ 2017ರ ಸೆಪ್ಟೆಂಬರ್ 30ರಂದು ಸಂಜೆ ಅಜೀಂಪೇಟೆಯ ಹೊರಗೆ ನಡೆದ ಜಮ್ಮಿ ಪೂಜೆಯಲ್ಲಿ ಪಾಲ್ಗೊಂಡು ಬಟ್ಟ ಲಿಂಗಯ್ಯ ಮನೆಗೆ ಮರಳುತ್ತಿದ್ದರು. ಆ ವೇಳೆ ಮೃತ ಪಂಡಿತ್ ರಾಜಮಲ್ಲು ಅವರ ಪುತ್ರ ರಾಮಸ್ವಾಮಿ ಇತರ ಆರೋಪಿಗಳೊಂದಿಗೆ ಅಲ್ಲಿಗೆ ಆಗಮಿಸಿದ್ದರು. ಇವರೆಲ್ಲರೂ ಅಂದಿನ ಸರಪಂಚ ಪೋಳೇಬಾಯಿ ಲಿಂಗಯ್ಯನವರ ಪ್ರಚೋದನೆಯಿಂದ ಬಟ್ಟು ಲಿಂಗಯ್ಯನವರನ್ನು ಜಾತಿಯ ಹೆಸರಿನಲ್ಲಿ ನಿಂದಿಸಿ ಕಲ್ಲು, ದೊಣ್ಣೆಗಳಿಂದ ಹೊಡೆದು ಕೊಂದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಡ್ಡಗೂಡೂರು ಪೊಲೀಸರು 18 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು. ಈ 18 ಅಪರಾಧಿಗಳಲ್ಲಿ ಓರ್ವ ಜಕ್ಕುಲ ಭಿಕ್ಷಾಮಯ್ಯ ಎಂಬಾತ ಮೃತಪಟ್ಟಿದ್ದಾನೆ. ಈಗ ಆರೋಪ ಸಾಬೀತಾಗಿದ್ದರಿಂದ ಉಳಿದ 17 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಆದ್ಯತೆಯ ಮೇರೆಗೆ ಇಂದು ವಿಚಾರಣೆ