ನವದೆಹಲಿ:ಅಧಿಕ ಇಳುವರಿ ಮತ್ತು ಪೌಷ್ಠಿಕಾಂಶ ಹೆಚ್ಚಿಸಬಲ್ಲ 109 ಹೊಸ ಪ್ರಭೇದಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದರು. ಈ ಬೀಜಗಳನ್ನು ದೇಶದ ವಿವಿಧ ವಾತಾವರಣಗಳಲ್ಲಿ ಜೈವಿಕ ಬಲವರ್ಧಿತ ಒಣ ಬೇಸಾಯ ಮತ್ತು ತೋಟಗಾರಿಕೆ ಬೆಳೆಗಳಾಗಿ ಬೆಳೆಯಬಹುದಾಗಿದೆ.
ಇಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ, ಬಳಿಕ ಪ್ರಯೋಗಾಲಯದಲ್ಲಿ ಪಾಸಾಗಿ ರೈತರಿಗೆ ಅನುಕೂಲವಾಗುವ ಉತ್ಕೃಷ್ಟ ಬೀಜಗಳನ್ನು ಬಿಡುಗಡೆ ಮಾಡಿದರು. ಈ ಬೀಜಗಳಿಂದ ಬೆಳೆಯ ಉತ್ಪಾದನೆ ಹೆಚ್ಚಾಗಲಿದೆ. ಇದರಿಂದ ರೈತರ ಆದಾಯವೂ ವೃದ್ಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೊಸ ಬೀಜಗಳ ಬಗ್ಗೆ ಮಾಹಿತಿ:ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಪ್ರಯತ್ನಗಳಲ್ಲಿ ಈ ಹೊಸ ಪ್ರಭೇದಗಳು ಸಹಕಾರಿಯಾಗಿವೆ ಎಂದು ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದರು. ಇದೇ ವೇಳೆ ರೈತರು ಮತ್ತು ಕೃಷಿ ವಿಜ್ಞಾನಿಗಳ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಕೃಷಿಯಲ್ಲಿ ಹೊಸ ಪ್ರಭೇದಗಳ ಆವಿಷ್ಕಾರ ರೈತರ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಪರಿಸರದ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚಿಸಿದರು.