ತಿರುವನಂತಪುರಂ:ಆಲಪ್ಪುಳದ ಸಿಪಿಐ(ಎಂ) ನಾಯಕರೊಬ್ಬರು ಬಿಜೆಪಿ ಸೇರಿದ ಬೆನಲ್ಲೇ ಇದೀಗ ಮತ್ತೊಬ್ಬ ನಾಯಕರು ಅದೇ ಹಾದಿಯಲ್ಲಿ ಸಾಗಿದ್ದಾರೆ. ಪಕ್ಷದ ಸಮಾವೇಶದಲ್ಲಿ ಉಂಟಾದ ಕಲಹದ ಬೆನ್ನಲ್ಲೇ ಇದೀಗ ಮಧು ಮುಲ್ಲಸ್ಸೆರಿ ಪಕ್ಷ ತೊರೆದಿದ್ದಾರೆ. ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಸಿಪಿಐ (ಎಂ) ನಾಯಕರು, ಮುಲ್ಲಸ್ಸೆರಿ ಸಾರ್ವಜನಿಕವಾಗಿ ಪಕ್ಷದ ತತ್ವಕ್ಕೆ ವಿರೋಧಿಯಾಗಿ ನಡೆದುಕೊಂಡ ಹಿನ್ನೆಲೆ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದಿದ್ದಾರೆ. ಸಿಪಿಐ (ಎಂ) ಪಕ್ಷದಲ್ಲಿ 42 ವರ್ಷಗಳ ಕಾಲ ದುಡಿದ ಮತ್ತು ಮಂಗಳಪುರಂನಲ್ಲಿ ಸಿಪಿಐ(ಎಂ) ಮಾಜಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಮುಲ್ಲಸ್ಸೆರಿ, ಪಕ್ಷ ತೊರೆಯಲು ಶಾಸಕ ಮತ್ತು ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ ಜಾಯ್ ಕಾರಣ ಎಂದು ಆರೋಪಿಸಿದ್ದಾರೆ. ಸಂಕಷ್ಟ ಸಂದರ್ಭ ಸೇರಿದಂತೆ ಜಿಲ್ಲಾ ಕಾರ್ಯದರ್ಶಿ ವಿ ಜಾಯ್ ಜೊತೆಯಲ್ಲಿಯೂ ಕೂಡ ಪಕ್ಷಕ್ಕಾಗಿ 42 ವರ್ಷಗಳ ಕಾಲ ದುಡಿದಿದ್ದೆ. ಆದರೆ, ಇದೀಗ ಪಕ್ಷ ತೊರೆಯುತ್ತಿದ್ದೇನೆ ಎಂದಿದ್ದಾರೆ.
ಟಿವಿ ಚಾನಲ್ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರು ನಾಯಕರು ತಮ್ಮ ಸಂಪರ್ಕದಲ್ಲಿದ್ದು, ಯಾವ ಪಕ್ಷ ಸೇರುವುದು ಎಂಬ ಕುರಿತು ಡಿ. 3ರಂದು 11ಕ್ಕೆ ಘೋಷಿಸಲಾಗುವುದು ಎಂದಿದ್ದರು. ಬಿಜೆಪಿ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾದ ವಿವಿ ರಾಜೇಶ್ ಮತ್ತು ಇತರ ಪಕ್ಷದ ನಾಯಕರು ಇಂದು ಮುಂಜಾನೆ ಸಿಪಿಐ (ಎಂ) ನಾಯಕ ಮುಲ್ಲಸ್ಸೆರಿಯನ್ನು ಭೇಟಿಯಾದರು.