ಕರ್ನಾಟಕ

karnataka

ETV Bharat / bharat

ಪಕ್ಷಾಂತರ: ಎಂಟು ಶಾಸಕರನ್ನು ಅನರ್ಹಗೊಳಿಸಿದ ಆಂಧ್ರಪ್ರದೇಶ ಸ್ವೀಕರ್​ - ಆಂಧ್ರಪ್ರದೇಶ ಸ್ವೀಕರ್​

ಪಕ್ಷಾಂತರ ನಿಷೇಧ ಕಾನೂನಿನ ಅನ್ವಯ ಆಂಧ್ರಪ್ರದೇಶ ಸ್ಪೀಕರ್​​​, ವೈಎಸ್​ಆರ್​ಪಿ, ಟಿಡಿಪಿಯ 8 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಆಂಧ್ರ ಸಿಎಂಒ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Andhra Pradesh Assembly Speaker disqualifies 8 MLAs for party defection
ಪಕ್ಷಾಂತರ: ಎಂಟು ಶಾಸಕರನ್ನು ಅನರ್ಹಗೊಳಿಸಿದ ಆಂಧ್ರಪ್ರದೇಶ ಸ್ವೀಕರ್​

By ETV Bharat Karnataka Team

Published : Feb 27, 2024, 9:19 AM IST

ಅಮರಾವತಿ: ಆಂಧ್ರ ಪ್ರದೇಶ ವಿಧಾನಸಭೆ ಸ್ಪೀಕರ್ ತಮ್ಮಿನೇನಿ ಸೀತಾರಾಂ ಅವರು ಪಕ್ಷಾಂತರದ ವಿರುದ್ಧ ನಿರ್ಣಾಯಕ ನಿಲುವು ತೆಗೆದುಕೊಂಡಿದ್ದಾರೆ. ಈ ಸಂಬಂಧ ಅವರು 8 ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ. ಯುವಜನ ಶ್ರಮಿಕರ ರೈತ ಕಾಂಗ್ರೆಸ್ ಪಕ್ಷ - ವೈಎಸ್‌ಆರ್‌ಸಿಪಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸ್ಪೀಕರ್, ಶಾಸಕರಾದ ಆನಂ ರಾಮನಾರಾಯಣ ರೆಡ್ಡಿ, ಮೇಕಪತಿ ಚಂದ್ರಶೇಖರ್ ರೆಡ್ಡಿ, ಕೋಟಂ ರೆಡ್ಡಿ ಶ್ರೀಧರ್ ರೆಡ್ಡಿ ಮತ್ತು ಉಂಡವಳ್ಳಿ ಶ್ರೀದೇವಿ ಸೇರಿದಂತೆ ಎಂಟು ಮಂದಿಯನ್ನು ಅನರ್ಹ ಎಂದು ತೀರ್ಪು ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ- ಸಿಎಂಒ ಅಧಿಕೃತ ಪ್ರಕಟಣೆ ಹೇಳಿದೆ ಎಂದು ವರದಿಯಾಗಿದೆ.

ಅನರ್ಹಗೊಂಡ ಶಾಸಕರು ತಮ್ಮ ಮೂಲ ಪಕ್ಷಗಳಿಂದ ಇತರ ರಾಜಕೀಯ ಪಕ್ಷಗಳತ್ತ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದಾರೆ. ಇದು ಪ್ರಜಾಪ್ರಭುತ್ವದ ರಚನೆ ಮತ್ತು ಮತದಾರರ ಆದೇಶದ ವಿರುದ್ದವಾಗಿದೆ ಎಂಬುದನ್ನು ಸ್ಪೀಕರ್​ ಗಮನಿಸಿದ್ದಾರೆ. ಹೀಗಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ 'ಪಕ್ಷಾಂತರ' ಪಿಡುಗು ವ್ಯಾಪಕವಾಗುತ್ತಿದೆ ಎಂದು ಅವರು ಇದೇ ವೇಳೆ, ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷವೊಂದರ ಸದಸ್ಯರು ತಮ್ಮ ಪಕ್ಷವನ್ನು ತೊರೆದು, ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸುವುದನ್ನು ಪಕ್ಷಾಂತರ ಎಂದು ಕರೆಯಲಾಗುತ್ತಿದೆ.

ಆಂಧ್ರ ಸಿಎಂಒ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಶಾಸಕರ ವಿರುದ್ಧ ವೈಎಸ್‌ಆರ್‌ಸಿಪಿ ಸ್ಪೀಕರ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಲಾಗಿರುವ ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅನರ್ಹತೆಯ ನಿರ್ಧಾರಕ್ಕೆ ಬರಲಾಗಿದೆ.

ಅನರ್ಹಗೊಂಡ ಸದಸ್ಯರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಮತ್ತು ಪಕ್ಷದ ತತ್ವಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಇದಲ್ಲದೇ ತೆಲುಗು ದೇಶಂ ಪಕ್ಷ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಮದ್ದಲಗಿರಿ, ಕರಣಂ ಬಲರಾಮ್, ವಲ್ಲಭನೇನಿ ವಂಶಿ ಮತ್ತು ವಾಸುಪಲ್ಲಿ ಗಣೇಶ್ ಅವರನ್ನೂ ಕೂಡಾ ಸ್ಪೀಕರ್​ ಅನರ್ಹಗೊಳಿಸಿದ್ದಾರೆ. ಟಿಡಿಪಿ ಸಲ್ಲಿಸಿರುವ ಅರ್ಜಿಯಲ್ಲಿ, ಪಕ್ಷದ ನಿಯಮಗಳನ್ನು ಮೀರಿ, ವಿವಿಧ ದುರ್ನಡತೆಯನ್ನು ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಅನರ್ಹತೆಯ ನಿರ್ಧಾರ ಆಂಧ್ರಪ್ರದೇಶದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಏಕೆಂದರೆ ಈ ನಿರ್ಧಾರಗಳು ವಿಧಾನಸಭೆಯ ಅಧಿಕಾರ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಸಂಭವನೀಯ ಉಪಚುನಾವಣೆಗಳ ಪರಿಣಾಮಗಳು ಮತ್ತು ಸಂಭಾವ್ಯತೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಗಳಿಗೆ ಕಾರಣವಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ:ರಾಜ್ಯಸಭೆ ಚುನಾವಣೆ: ಕ್ರಾಸ್‌ ವೋಟಿಂಗ್‌ ಭೀತಿ, ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮತದಾನ ತರಬೇತಿ

ABOUT THE AUTHOR

...view details