ಶಿರಡಿ: ಸಾಯಿಬಾಬಾ ಸಂಸ್ಥಾನವು ನಡೆಸುವ ಸಾಯಿ ಪ್ರಸಾದಾಲಯದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಮದ್ಯಪಾನ ಮತ್ತು ಧೂಮಪಾನದ ಮೂಲಕ ಊಟದ ಹಾಲ್‌ಗೆ ತೆರಳಿ ತೊಂದರೆ ನೀಡುತ್ತಿದ್ದ ಭಕ್ತರ ದುರ್ವರ್ತನೆಯನ್ನು ತಡೆಯಲು ಪ್ರಸಾದಾಲಯದಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತರಲು ಸಂಸ್ಥಾನವು ನಿರ್ಧರಿಸಿದೆ.
ಸಾಯಿ ದರ್ಶನದ ನಂತರ ಉಚಿತ ಊಟದ ಟೋಕನ್‌ಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಈಗ, ಟೋಕನ್ ಇಲ್ಲದೇ ಪ್ರಸಾದಾಲಯಕ್ಕೆ ಪ್ರವೇಶ ಸಾಧ್ಯವಿಲ್ಲ. ಆದ್ದರಿಂದ, ಈ ನಿಯಮವನ್ನು ಇಂದಿನಿಂದ (ಫೆ. 6) ಜಾರಿಗೆ ತರಲಾಗುವುದು ಎಂದು ಸಾಯಿ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ ಗಾಡಿಲ್ಕರ್ ತಿಳಿಸಿದ್ದಾರೆ.
"ಏಷ್ಯಾದ ಅತಿದೊಡ್ಡ ಪ್ರಸಾದಾಲಯ ಶಿರಡಿಯಲ್ಲಿದ್ದು, ಇದನ್ನು ಸಾಯಿಬಾಬಾ ಸಂಸ್ಥಾನವು ನಡೆಸುತ್ತಿದೆ. ಸರಾಸರಿ ಐವತ್ತು ಸಾವಿರ ಭಕ್ತರು ಪ್ರತಿದಿನ ಇಲ್ಲಿಗೆ ಆಗಮಿಸಿ ಉಚಿತ ಪ್ರಸಾದದ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ, ಕೆಲವು ಮಾದಕ ವ್ಯಸನಿಗಳು ಮತ್ತು ಧೂಮಪಾನಿಗಳು ಪ್ರಸಾದಾಲಯ ಪ್ರವೇಶಿಸಿ ಪ್ರಸಾದ ಸೇವಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಉಳಿದ ಭಕ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಾಯಿಬಾಬಾ ಸಂಸ್ಥಾನಕ್ಕೆ ಹಲವು ದೂರುಗಳು ಸಹ ಬಂದಿವೆ. ಆದ್ದರಿಂದ, ಸಾಯಿಬಾಬಾ ಸಂಸ್ಥಾನದಿಂದ ಪ್ರಸಾದಾಲಯ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ" ಎಂದು ಗೋರಕ್ಷ ಗಾಡಿಲ್ಕರ್ ಅವರು ತಿಳಿಸಿದ್ದಾರೆ.
"ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸಾಯಿ ಮಂದಿರದಿಂದ ಹೊರಬರುವ ಭಕ್ತರಿಗೆ ಉಡಿ ಮತ್ತು ಬಂಡಿ ಪ್ರಸಾದದೊಂದಿಗೆ ಸಾಯಿ ಪ್ರಸಾದಾಲಯದಲ್ಲಿ ಉಚಿತ ಆಹಾರಕ್ಕಾಗಿ ಟೋಕನ್‌ಗಳನ್ನು ನೀಡಲಾಗುವುದು. ಅಲ್ಲದೇ, ಮೊದಲು ಪ್ರಸಾದ ಸೇವಿಸುವ ಭಕ್ತರಿಗೆ ಪ್ರಸಾದಾಲಯದಲ್ಲಿಯೇ ಉಚಿತ ಆಹಾರಕ್ಕಾಗಿ ಟೋಕನ್‌ಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಸಾಯಿ ಸಂಸ್ಥಾನದ ಎರಡೂ ಆಸ್ಪತ್ರೆಗಳ ರೋಗಿಗಳು ಮತ್ತು ಅವರ ಸಂಬಂಧಿಕರಿಗೂ ಟೋಕನ್‌ಗಳನ್ನು ನೀಡಲಾಗುವುದು. ಅಲ್ಲದೆ, ಶಿರಡಿಗೆ ಬರುವ ಯಾವುದೇ ಭಕ್ತ ಹಸಿವಿನಿಂದ ಇರಬಾರದು. ಇದನ್ನು ಸಾಯಿಬಾಬಾ ಸಂಸ್ಥಾನವು ಸಹ ಖಚಿತಪಡಿಸಿದೆ" ಎಂದು ಅವರು ಹೇಳಿದರು.
ಇತ್ತೀಚೆಗೆ, ಸಾಯಿ ಸಂಸ್ಥಾನದ ಇಬ್ಬರು ಉದ್ಯೋಗಿಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಈ ಕಾರಣದಿಂದಾಗಿ, ಆಡಳಿತ ಮಂಡಳಿ ಕೆಲವು ಬದಲಾವಣೆಗಳನ್ನು ತರುತ್ತಿದೆ. ಅಲ್ಲದೇ ಶಿರಡಿಯಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಇದರಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
"ಉಚಿತ ಊಟ ಸೇವಿಸುವ ಸಲುವಾಗಿಯೇ ಕಲವರು ಶಿರಡಿಗೆ ಭೇಟಿ ನೀಡುತ್ತಾರೆ. ಇದಲ್ಲದೇ ಮಹಾರಾಷ್ಟ್ರದ ಎಲ್ಲಾ ಭಿಕ್ಷುಕರು ಇಲ್ಲಿ ಸೇಡುತ್ತಾರೆ" ಎಂದು ಕೆಲವು ದಿನಗಳ ಹಿಂದೆ, ಮಾಜಿ ಬಿಜೆಪಿ ಸಂಸದ ಸುಜಯ್ ವಿಖೆ ಪಾಟೀಲ್ ಅವರು ಹೇಳಿಕೆ ನೀಡುವ ಮೂಲಕ ವ್ಯವಸ್ಥೆಯನ್ನು ಖಂಡಿಸಿದ್ದರು.
ಇವರ ಹೇಳಿಕೆ ಬಳಿಕ, ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ವ್ಯವಸ್ಥೆಯನ್ನು ನಿಲ್ಲಿಸಿ ಹಣ ಪಾವತಿಸಿ ಪ್ರಸಾದ ಸೇವಿಸುವ ವ್ಯವಸ್ಥೆ ಜಾರಿ ಮಾಡುವಂತೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಉಚಿತ ಪ್ರಸಾದ ವ್ಯವಸ್ಥೆ ನಿಲ್ಲಿಸುವ ಬದಲು, ಟೋಕನ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಟೋಕನ್ ವ್ಯವಸ್ಥೆ ಮಾಡುವುದರಿಂದ ಪ್ರಸಾದಾಲಯಕ್ಕೆ ಬರುವ ಭಕ್ತರನ್ನು ಹೊರತುಪಡಿಸಿ ಇತರ ಜನರನ್ನು ನಿಯಂತ್ರಣ ಮಾಡಬಹುದು ಎಂದು ತಿಳಿಸಿದ್ದರು.