ಅಲ್ವಾರ್ (ರಾಜಸ್ಥಾನ) : ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ಗಮನದಲ್ಲಿರಿಸಿಕೊಂಡು, ಅವರ ಸುರಕ್ಷತೆಗಾಗಿ ವಿದ್ಯಾರ್ಥಿಯೊಬ್ಬರು ಹೊಸ ಸಾಧನವನ್ನು ಆವಿಷ್ಕಾರ ಮಾಡಿದ್ದಾರೆ. ಇದು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ವಾರ್ ಜಿಲ್ಲೆಯ ಲಕ್ಷ್ಮಣಗಢ ಪಟ್ಟಣದ ಲಿಲಿ ಗ್ರಾಮದ ವಿವೇಕ್ ಚೌಧರಿ ಎಂಬ ವಿದ್ಯಾರ್ಥಿ ಈ ಸಾಧನ ಆವಿಷ್ಕರಿಸಿದವರು.
ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ ಹಾನಿ ಇಲ್ಲ. 2 ತಿಂಗಳಲ್ಲಿ ಈ ಶೂ ವಿನ್ಯಾಸ ಮಾಡಿದ್ದು, ಇದರ ವೆಚ್ಚ ಕೇವಲ 3500 ರೂ. ಆಗಿದೆ. ಇದೀಗ ಈ ಸಾಧನಕ್ಕೆ ಪೇಟೆಂಟ್ ಪಡೆಯುವ ಪ್ರಕ್ರಿಯೆಯಲ್ಲಿ ವಿವೇಕ್ ಇದ್ದಾರೆ. ಅವರ ಈ ಆವಿಷ್ಕಾರಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪದವಿ ವಿದ್ಯಾರ್ಥಿ : ವಿವೇಕ್ ಚೌಧರಿ ತಂದೆ ರಾಜು ಚೌಧರಿ ಅಲ್ವಾರ್‌ನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್. ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ಅಲ್ವಾರ್ ನಗರದ ಮೋತಿ ನಗರದಲ್ಲಿ ವಾಸಿಸುತ್ತಿದ್ದಾರೆ. ವಿವೇಕ್ ಪಾಲಿಟೆಕ್ನಿಕ್ (ಎಲೆಕ್ಟ್ರಿಕಲ್) ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅವರಿಗೆ ಏನಾದರೂ ಮಾಡಬೇಕು ಎಂಬ ಅವರ ನಿರ್ಧಾರ ಈ ಸಾಧನದ ಆವಿಷ್ಕಾರಕ್ಕೆ ಕಾರಣವಾಗಿದೆ.
ಆರಂಭದಲ್ಲಿ ಮನೆಯವರಿಗೆ ತಿಳಿಸದೆ ಸ್ನೇಹಿತನೊಂದಿಗೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇದೀಗ ಅವರ ಈ ಸಾಧನ ಕಂಡು ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲಿ ಸ್ನೇಹಿತರು ಇದನ್ನು ಅಸಾಧ್ಯ ಎಂದು ತಿಳಿಸಿದರು. ಕಾರ್ಯದಲ್ಲಿ ಅನೇಕ ತೊಂದರೆಗಳು ಕೂಡ ಎದುರಾದವು. ಇಂಟರ್ನೆಟ್ ಮತ್ತು ಯೂಟ್ಯೂಬ್ ವಿಡಿಯೋಗಳ ಸಹಾಯವನ್ನು ಪಡೆದು, ಅಂತಿಮವಾಗಿ ಮಹಿಳಾ ಸುರಕ್ಷತಾ ಸಾಧನ ತಯಾರಿಸಲಾಯಿತು ಎಂದಿದ್ದಾರೆ. ಈ ಶೂಗೆ ಡಬ್ಲ್ಯೂಎಸ್ಎಸ್ ಅಂದರೆ ಮಹಿಳಾ ಸುರಕ್ಷತಾ ಶೂ ಎಂದು ಹೆಸರಿಡಲಾಗಿದೆ. ಇದರಲ್ಲಿ ಜಿಪಿಎಸ್ ಮಾದರಿ, ಐಸಿ, ಪವರ್ ಮಾಡ್ಯುಲೇಟರ್, ವೋಲ್ಟೇಜ್ ಬೂಸ್ಟರ್ ಸೇರಿದಂತೆ ಹಲವು ಸಾಧನಗಳನ್ನು ಅಳವಡಿಸಲಾಗಿದೆ.