ಅಹಮದಾಬಾದ್ (ಗುಜರಾತ್): ಇಲ್ಲಿನ ಹಲವು ಶಾಲೆಗಳಿಗೆ ಸೋಮವಾರ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಮೇಲ್ ಬಂದಿವೆ. ಸೋಮವಾರ ಇಮೇಲ್ ಮೂಲಕ ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅಹಮದಾಬಾದ್ ಡಿಸಿಪಿ ಸೈಬರ್ ಕ್ರೈಂ ಬ್ರಾಂಚ್ ಲವೀನಾ ಸಿನ್ಹಾ ಪ್ರತಿಕ್ರಿಯಿಸಿ, ಭಯಪಡುವ ಅಗತ್ಯವಿಲ್ಲ. ಕೆಲವು ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್‌ಗಳು ಬಂದಿವೆ. ಇಲ್ಲಿಯವರೆಗೆ, ಆರು ಶಾಲೆಗಳು ಅಂತಹ ಇಮೇಲ್‌ಗಳನ್ನು ಸ್ವೀಕರಿಸಿವೆ ಮತ್ತು ಅದರ ಬಗ್ಗೆ ನಮಗೆ ತಿಳಿಸಿವೆ. ಇದು ಕೆಲವು ದಿನಗಳ ಹಿಂದೆ ದೆಹಲಿಯ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆಯ ಮಾದರಿಯಲ್ಲಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ನಾಳೆ ಮತದಾನದ ದಿನವಾಗಿರುವುದರಿಂದ ಜನರು ಗಾಬರಿಯಾಗಬಾರದು ಎಂದು ಹೇಳಿದರು.
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಇಮೇಲ್‌ನ ಡೊಮೇನ್ ಭಾರತದಿಂದ ಹೊರಗಿದೆ. ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಶಾಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.