ಪುರುಲಿಯಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಸದರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ ಆರೋಪಿಯೊಬ್ಬ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಪುರುಲಿಯಾ ಪುರಸಭೆಯ ವಾರ್ಡ್ ನಂ.15 ರ ನಿವಾಸಿ ಸಾಹಿದ್ ಅನ್ಸಾರಿ ಎಂಬಾತನನ್ನು ಬಂಧಿಸಿ, ವಿಚಾರಣೆಗಾಗಿ ಪುರುಲಿಯಾ ಸದರ್ ಪೊಲೀಸ್ ಠಾಣೆಗೆ ಸಿಬ್ಬಂದಿ ಕರೆತಂದಿದ್ದರು ಎಂದು ವರದಿಯಾಗಿದೆ.
ಗುರುವಾರ ಸಂಜೆ ಠಾಣೆಯೊಳಗೆ ವಿಚಾರಣೆ ನಡೆಸುತ್ತಿದ್ದಾಗ ಜೇಬಿನಿಂದ ಚಾಕು ತೆಗೆದ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸ್ ಠಾಣೆಯೊಳಗೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೊಲೆ ಪ್ರಕರಣದಲ್ಲಿ ಸಾಹಿದ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ವಿಚಾರಣೆಗಾಗಿ ಪುರುಲಿಯಾ ಸದರ್ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತನಿಖಾಧಿಕಾರಿಗೆ ಸಹಕರಿಸಲಿಲ್ಲ ಎಂದು ತಿಳಿದುಬಂದಿದೆ ಮತ್ತು ಅಲ್ಲದೇ ಎಲ್ಲರಿಗೂ ಆಶ್ಚರ್ಯವಾಗುವಂತೆ, ಆರೋಪಿ ಆಕ್ರಮಣಕಾರಿಯಾಗಿ ತನ್ನ ಜೇಬಿನಿಂದ ಚಾಕುವನ್ನು ಹೊರತೆಗೆದು ತನಿಖಾಧಿಕಾರಿಗಳ ಮೇಲೆ ಎರಗಿದ್ದಾನೆ ಎಂದು ಗೊತ್ತಾಗಿದೆ.
ಪೊಲೀಸರು ಆರೋಪಿಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬದಲಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನಿಖಾಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಮತ್ತೊಂದೆಡೆ, ಘಟನೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ಪೊಲೀಸರಿಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುರುಲಿಯಾ ಸದರ್ ಪೊಲೀಸ್ ಠಾಣೆ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಮುಜಾಫರ್ಪುರದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು.. ಬಿಗಿ ಬಂದೋಬಸ್ತ್