ನವದೆಹಲಿ:ಜಾತಿನಿಂದನೆ ಪ್ರಕರಣಗಳ ಪೈಕಿ ದೇಶದ 13 ರಾಜ್ಯಗಳಲ್ಲಿ ಅತಿಹೆಚ್ಚು ಆರೋಪಗಳು ಕೇಳಿಬಂದಿವೆ. 2022 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 98 ರಷ್ಟು ಕೇಸ್ಗಳು ಈ ರಾಜ್ಯಗಳಲ್ಲಿ ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ವರದಿಯಲ್ಲಿ ತಿಳಿಸಿದೆ.
ಪರಿಶಿಷ್ಟ ಜಾತಿಗಳ (ಎಸ್‌ಸಿ) ನಿಂದನೆಯ ಮೇಲೆ ಶೇಕಡಾ 97.7ರಷ್ಟು ಕೇಸ್ಗಳು ದಾಖಲಾಗಿವೆ. ಈ ಪೈಕಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧಗಳು ನಮೂದಾಗಿವೆ. ಅದೇ ರೀತಿ ಪರಿಶಿಷ್ಟ ಪಂಗಡಗಳ (ಎಸ್‌ಟಿ) ದೌರ್ಜನ್ಯಗಳ ಮೇಲೆ 13 ರಾಜ್ಯಗಳಲ್ಲಿ ಶೇಕಡಾ 98.91 ರಷ್ಟು ಕೇಸ್ ದಾಖಲಾಗಿವೆ. ಈ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾದಲ್ಲಿ ಅತಿಹೆಚ್ಚು ಕೇಸ್ ನಮೂದಾಗಿವೆ.
ಎಸ್‌ಸಿ ನಿಂದನೆ ಕೇಸ್ (ರಾಜ್ಯವಾರು):2022 ರಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ನಿಂದಿಸಿ ದಾಖಲಾದ ಒಟ್ಟು ಪ್ರಕರಣಗಳು 51,656. ಇದರಲ್ಲಿ ಉತ್ತರ ಪ್ರದೇಶದಲ್ಲಿ ಶೇಕಡಾ 23.78 ರಷ್ಟು ಅಂದರೆ, 12,287 ಪ್ರಕರಣಗಳು ನಮೂದಾಗಿವೆ. ನಂತರ ರಾಜಸ್ಥಾನದಲ್ಲಿ 8,651 (ಶೇ.16.75), ಮಧ್ಯಪ್ರದೇಶದಲ್ಲಿ 7,732 (ಶೇ.14.97), ಬಿಹಾರದಲ್ಲಿ 6,799 (ಶೇ.13.16), ಒಡಿಶಾದಲ್ಲಿ 3,576 (ಶೇ.6.93), ಮಹಾರಾಷ್ಟ್ರದಲ್ಲಿ 2,706 (ಶೇ.5.24) ಕೇಸ್ ದಾಖಲಾಗಿವೆ. ಅಂದರೆ, ಆರು ರಾಜ್ಯಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳು ಶೇಕಡಾ 81 ರಷ್ಟಿವೆ.