ನವದೆಹಲಿ: 2025-26ನೇ ಸಾಲಿನ ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ನಾಳೆ ಸಚಿವೆ (ಫೆ.1) 8ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಸೋಮವಾರದಿಂದ ಸಂಸತ್ನ ಎರಡೂ ಸದನಗಳಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ಆರಂಭವಾಗಲಿದೆ.
ಲೋಕಸಭೆಯಲ್ಲಿ ಫೆ.3 ಮತ್ತು 4ರಂದು ಎರಡು ದಿನ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಗೆ ಅವಕಾಶ ನೀಡಲಾಗಿದೆ. ರಾಜ್ಯಸಭೆಯಲ್ಲಿ ಮೂರು ದಿನ ಚರ್ಚೆಗೆ ಅವಕಾಶವಿದೆ. ಫೆ.6ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಚರ್ಚೆಗೆ ಉತ್ತರಿಸುವರು.
ಜ.30ರಂದು ಅಧಿವೇಶನದ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಬಜೆಟ್ ಅಧಿವೇಶನ ಸರಾಗವಾಗಿ ನಡೆಯಲು ಪ್ರತಿಪಕ್ಷಗಳ ಸಹಕಾರ ಕೋರಿದ್ದರು.
ಬಜೆಟ್ ಅಧಿವೇಶನದ ಮೊದಲ ಭಾಗ 9 ದಿನಗಳ ಕಾಲ ಅಂದರೆ ಜನವರಿ 31ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ಇದಾದ ಬಳಿಕ ಮತ್ತೆ ಫೆಬ್ರವರಿ 13ರಿಂದ ಸದನ ಆರಂಭವಾಗಲಿದ್ದು ಮಾರ್ಚ್ 10ಕ್ಕೆ ಬಜೆಟ್ ಪ್ರಕ್ರಿಯೆ ಮುಕ್ತಾಯವಾಗಲಿದೆ. ಏಪ್ರಿಲ್ 4ರಂದು ಅಧಿವೇಶನ ಮುಕ್ತಾಯವಾಗುತ್ತದೆ. ಒಟ್ಟಾರೆ 27 ದಿನಗಳ ಬಜೆಟ್ ಅಧಿವೇಶನ ಇದಾಗಿದೆ.
ವಿತ್ತ ಸಚಿವರ ಮುಂದಿರುವ ಸವಾಲುಗಳು: ಕುಸಿಯುತ್ತಿರುವ ಆರ್ಥಿಕ ವೃದ್ಧಿ ದರ, ಅಮೆರಿಕದ ಡಾಲರ್ ಎದುರು ರೂಪಾಯಿ ಕುಸಿತ ಸೇರಿದಂತೆ ಹಲವು ಸವಾಲುಗಳನ್ನು ಕೇಂದ್ರ ವಿತ್ತ ಸಚಿವರು ಬಜೆಟ್ನಲ್ಲಿ ಎದುರಿಸಬೇಕಿದೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ: 15 ಟೆಂಟ್‌ಗಳು ಭಸ್ಮ
ಇದನ್ನೂ ಓದಿ: ಮಹಾಕುಂಭಮೇಳ: ಕಾಲ್ತುಳಿತದಲ್ಲಿ ಬಿಹಾರದ 10 ಮಹಿಳಾ ಭಕ್ತರು ಮೃತ, ಹಲವರು ಇನ್ನೂ ನಾಪತ್ತೆ