Cricketer Becomes Taxi Driver: ವಿಶ್ವದಲ್ಲಿ ಫುಟ್ಬಾಲ್ ನಂತರ ಹೆಚ್ಚು ಖ್ಯಾತಿ ಪಡೆಯುತ್ತಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್. ಇತ್ತೀಚಿನ ದಿನಗಳಲ್ಲಿ ಇದು ಕಮರ್ಷಿಯಲ್ ಗೇಮ್ ಆಗಿಯೂ ಬೆಳೆಯುತ್ತಿದೆ. ಒಮ್ಮೆ ಕ್ರಿಕೆಟ್ನಲ್ಲಿ ಕ್ಲಿಕ್ ಆದರೆ ಸಾಕು ನೇಮ್-ಫೇಮ್ ಜೊತೆಗೆ ಆಟಗಾರರು ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ಅದರಲ್ಲೂ ಐಪಿಎಲ್‌ನಂತಹ ದೊಡ್ಡ ವೇದಿಕೆಗಳಲ್ಲಿ ಕಾಣಿಸಿಕೊಂಡರಂತೂ ಪ್ರತಿಷ್ಠೆಯೊಂದಿಗೆ ಆರ್ಥಿಕವಾಗಿಯೂ ಸದೃಢರಾಗುತ್ತಾರೆ.
ಆದರೆ ಒಂದು ಕಾಲದಲ್ಲಿ ಸ್ಟಾರ್ ಬೌಲರ್ ಆಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರೊಬ್ಬರು ಇಂದು ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ. ಮೂರು ಐಸಿಸಿ ಏಕದಿನ ವಿಶ್ವಕಪ್ನಲ್ಲೂ ಭಾಗಿಯಾಗಿದ್ದ ಇವರು ಚಾಲಕನಾಗಿ ಬದುಕು ಸಾಗಿಸುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ನ್ಯೂಜಿಲೆಂಡ್ನ ಮಾಜಿ ರಾಷ್ಟ್ರೀಯ ಆಟಗಾರ ಇವಾನ್ ಚಾಟ್‌ಫೀಲ್ಡ್.
ಚಾಟ್‌ಫೀಲ್ಡ್ ಅವರಿಗೀಗ 70 ವರ್ಷ. ಈ ಹಿಂದೆ ಇವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಮೂರು ಏಕದಿನ ವಿಶ್ವಕಪ್ಗಳನ್ನು ಆಡಿದ್ದರು. 1975ರಲ್ಲಿ ಟೆಸ್ಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಚಾಟ್ ಫೀಲ್ಡ್, 14 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು.
ಇವಾನ್ ಚಾಟ್‌ಫೀಲ್ಡ್ ಕ್ರಿಕೆಟ್ ವೃತ್ತಿಜೀವನ: ತಮ್ಮ ವೃತ್ತಿ ಜೀವನದಲ್ಲಿ 43 ಟೆಸ್ಟ್, 114 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಎರಡೂ ಸ್ವರೂಪದಲ್ಲಿ ಒಟ್ಟು 263 ವಿಕೆಟ್ಗಳನ್ನು ಪಡೆದಿದ್ದಾರೆ. ಫಸ್ಟ್ ಕ್ಲಾಸ್ನಲ್ಲಿ 157 ಪಂದ್ಯಗಳನ್ನು ಆಡಿ 587 ವಿಕೆಟ್ ಲಿಸ್ಟ್ ಎ ಕ್ರಿಕೆಟ್ನಲ್ಲಿ 222 ವಿಕೆಟ್ ಉರುಳಿಸಿದ್ದಾರೆ. 1979, 1983 ಮತ್ತು 1987ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ನ್ಯೂಜಿಲೆಂಡ್ನ ಡೇಂಜರಸ್ ಬೌಲರ್ ಎನಿಸಿಕೊಂಡಿದ್ದ ಇವರು 1989ರ ಬಳಿಕ ಕ್ರಿಕೆಟ್ನಿಂದ ದೂರ ಉಳಿದರು.
ಮೊದಲ ಪಂದ್ಯದಲ್ಲೇ ಗಾಯ: ಚಾಟ್‌ಫೀಲ್ಡ್ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾಗ ದುರಂತ ನಡೆದಿತ್ತು. ಚೆಂಡು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರುಪ್ರವೇಶಿಸಿದ್ದರು. ಚಾಟ್‌ಫೀಲ್ಡ್ ತಮ್ಮ ಪ್ರದರ್ಶನದಿಂದ ಅಭಿಮಾನಿಗಳನ್ನು ರಂಜಿಸುತ್ತಿದರು. ಕೊನೆಯ ಬಾರಿಗೆ 1987ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ, ಚಾಟ್‌ಫೀಲ್ಡ್ ಬೌಲಿಂಗ್ನಲ್ಲಿ ಗವಾಸ್ಕರ್ ಒಂದೇ ಓವರ್‌ನಲ್ಲಿ 21 ರನ್‌ಗಳನ್ನು ಬಾರಿಸಿದ್ದರು.
ಒಂದು ಕಾಲದಲ್ಲಿ ಡೇಂಜರಸ್ ಬೌಲರ್ ಎನಿಸಿಕೊಂಡಿದ್ದ ಇವರು ಇಂದು ಟ್ಯಾಕ್ಸಿ ಚಾಲಕನಾಗಿ ಸರಳ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಕುರಿತಾದ ವರದಿಗಳಾಗುತ್ತಿದ್ದು ಮತ್ತೆ ಬೆಳಕಿಗೆ ಬಂದಿದ್ದಾರೆ.
ಇದನ್ನೂ ಓದಿ: ಇನ್ನು 4 ರನ್ ಗಳಿಸಿದರೆ ವಿರಾಟ್ ಕೊಹ್ಲಿಯ ದೊಡ್ಡ ದಾಖಲೆ ಮುರಿಯಲಿರುವ ಹಾರ್ದಿಕ್ ಪಾಂಡ್ಯ!