ಮೈಸೂರು: "ಇ.ಡಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ನನ್ನ ಹಾಗೂ ನನ್ನ ಸರ್ಕಾರದ ತೇಜೋವಧೆ ಮಾಡಿಸುತ್ತಿದ್ದಾರೆ. ನಾನು ಸಿಎಂ ಆಗಿದ್ದಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ನಾನೂ ಸಹ ಕೋರ್ಟ್ಗೆ ಹೋಗಿದ್ದೇನೆ. ನನ್ನ ಶ್ರೀಮತಿಯ ವಿಚಾರಗಳು ಕೋರ್ಟ್ ಹೋಗಿವೆ. ಅವರಿಗೆ ಕೋರ್ಟ್ನಲ್ಲಿ ಸ್ಟೇ ಸಿಕ್ಕಿದೆ. ರಾಜ್ಯದ ಜನರಿಗೆ ನಮ್ಮ ಬಗ್ಗೆ ನಂಬಿಕೆ ಹೋಗಬೇಕು ಎಂಬ ದೃಷ್ಟಿಯಿಂದ ಈ ರೀತಿ ಮಾಡುತ್ತಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಸುತ್ತೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪೂರ್ಣಾವಧಿ ಸಿಎಂ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ನಮ್ಮದೇನೂ ಇಲ್ಲ" ಎಂದರು.
"ಇನ್ನೂ ಹಿಂದಿನ ಮುಡಾ ಆಯುಕ್ತ ನಟೇಶ್ ಇ.ಡಿ ನೋಟಿಸ್ ವಿರುದ್ಧ ಹೈಕೋರ್ಟ್ಗೆ ಹೋಗಿದ್ದರು. ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದ್ದು, ಇದು ನಟೇಶ್ ಅವರಿಗೆ ಇ.ಡಿ ನೋಟಿಸ್ ಕೊಟ್ಟಿದ್ದು ತಪ್ಪು ಎಂದು ಹೇಳಿದೆ" ಎಂದು ನಟೇಶ್ ಪ್ರಕರಣದ ಬಗ್ಗೆ ವಿವರಿಸಿದರು.
ಕೇಂದ್ರದಿಂದ ಅನ್ಯಾಯ: ಕೇಂದ್ರ ಬಜೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಬಾರಿಯ ಕೇಂದ್ರ ಬಜೆಟ್‌ನಿಂದ ನಾವು ಏನೂ ನಿರೀಕ್ಷೆ ಮಾಡುವುದಿಲ್ಲ. ಅವರು ಕೇಳಿದ್ದನ್ನು ಕೊಡುವುದಿಲ್ಲ. ಜೊತೆಗೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದನ್ನೂ ಸಹ ಕೊಡುವುದಿಲ್ಲ. ಈ ಹಿಂದೆ ಕೃಷ್ಣ ಮೇಲ್ಡಂಡೆ ಯೋಜನೆಗೆ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಏನೂ ಕೊಡಲಿಲ್ಲ, ಜೊತೆಗೆ ನಮ್ಮ ತೆರಿಗೆ ಹಣದ ಪಾಲನ್ನು ಸಹ ನಮಗೆ ಸರಿಯಾಗಿ ಕೊಟ್ಟಿಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿದೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ: "ಜನರು ಎಲ್ಲಿ ಸಾಲ ಸಿಗುತ್ತದೋ, ಅಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಬಡ್ಡಿ ಜಾಸ್ತಿ ಹಾಕಿ ವಸೂಲಿ ಮಾಡುತ್ತಾರೆ. ಕೊಡದಿದ್ದಾಗ ಗೂಂಡಾಗಳನ್ನು ಬಿಟ್ಟು ವಸೂಲಿ ಮಾಡಿಸುತ್ತಾರೆ. ಮೈಕ್ರೋ ಫೈನಾನ್ಸ್ ಆರ್ಬಿಐ ಅಡಿ ಬರುತ್ತವೆ. ಆರ್ಬಿಐ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈಗ ಸುಗ್ರೀವಾಜ್ಞೆ ಮಾಡಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆದರೆ ಯಾರೂ ಕೂಡ ಆತ್ಮಹತ್ಯೆ ನಿರ್ಧಾರ ಮಾಡಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ" ಎಂದರು.
ಕುಂಭಮೇಳದ ಬಗ್ಗೆ ಕೆಟ್ಟದಾಗಿ ಮಾತನಾಡುವವರು "ಅಯೋಗ್ಯರು" ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ಅವರ ಪಕ್ಷದಲ್ಲೇ ವಿಜಯೇಂದ್ರ ಸರಿ ಇಿಲ್ಲ ಎನ್ನುತ್ತಾರೆ. ಇನ್ನೂ ವಿಜಯೇಂದ್ರ ಬಗ್ಗೆ ನಾನೇನು ಹೇಳಲಿ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಸರ್ಕಾರದ ಯೋಜನೆಗಳ ವೈಫಲ್ಯಕ್ಕೆ ಮೈಕ್ರೋ ಫೈನಾನ್ಸ್ ಪ್ರಕರಣಗಳೇ ಸಾಕ್ಷಿ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ