ಹೈದರಾಬಾದ್:ಇಲ್ಲಿನಗಚ್ಚಿಬೌಲಿಯ ಪ್ರಿಸ್ಮ್ ಪಬ್‌ನಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಗುಂಡು ಹಾರಿಸಿದ ಕುಖ್ಯಾತ ದರೋಡೆಕೋರ ಬಥುಲಾ ಪ್ರಭಾಕರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನ ಐಷಾರಾಮಿ ಜೀವನಶೈಲಿ ಹಾಗೂ ಅಪರಾಧದ ಇತಿಹಾಸ ಕೇಳಿ ಶಾಕ್ ಆಗಿದ್ದಾರೆ.
ಬಂಧಿತ ಪ್ರಭಾಕರ್ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಕೇರಳದಾದ್ಯಂತ 80 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ. ಕಳೆದ 12 ವರ್ಷಗಳಿಂದ ಸುಲಿಗೆ, ದರೋಡೆ, ಲೂಟಿ ಮಾಡಿದ ದುಡ್ಡಿನಿಂದ ದುಂದು ವೆಚ್ಚ, ಐಷಾರಾಮಿ ಜೀವನಶೈಲಿ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೂಟಿ ದುಡ್ಡಿನಿಂದ ಐಷಾರಾಮಿ ಜಿಂದಗಿ: ಉನ್ನತ ದರ್ಜೆಯ ಪಬ್‌ಗಳಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದ ಪ್ರಭಾಕರ್, ಕೇವಲ 11 ಕಳ್ಳತನ ಪ್ರಕರಣದಿಂದ 2.5 ಕೋಟಿ ರೂ ಮೌಲ್ಯದ ಆಸ್ತಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಕಳ್ಳತನದ ದುಡ್ಡಿನಿಂದಲೇ ಐಷಾರಾಮಿ ಕಾರುಗಳನ್ನೂ ಖರೀದಿಸಿದ್ದಾನೆ. ಕಳೆದ 12 ವರ್ಷಗಳಿಂದ ಸುಲಿಗೆ, ದರೋಡೆ, ಲೂಟಿ ಮಾಡಿದ ದುಡ್ಡಿನಿಂದಲೇ ಬದುಕು ಸಾಗಿಸುತ್ತಿದ್ದ.
ಶನಿವಾರ ನಡೆದ ಗುಂಡಿನ ದಾಳಿಯ ಬಳಿಕ ಗಚ್ಚಿಬೌಲಿಯ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯಿಂದ ಮೂರು ದೇಶೀಯ ಬಂದೂಕು ಮತ್ತು 451 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
8ನೇ ತರಗತಿ ಓದು:ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಸೋಮಲ ಮಂಡಲದ ಇರಿಕಪೆಂಟ ಗ್ರಾಮದ ಮೂಲದ ಪ್ರಭಾಕರ್ (30), ಬಾಲ್ಯದಲ್ಲಿಯೇ ಕುಟುಂಬಸಹಿತ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಡೇರುವಿಗೆ ವಲಸೆ ಬಂದಿದ್ದ. ಪೋಷಕರ ನಿಧನದ ಬಳಿಕ 9ನೇ ತರಗತಿಗೆ ಶಾಲೆ ತೊರೆದ ಈತ, 2013ರಲ್ಲಿ 19ನೇ ವಯಸ್ಸಿನಲ್ಲಿ ಮೊದಲ ಕಳ್ಳತನಕ್ಕೆ ಇಳಿದಿದ್ದ. ಪೊಲೀಸರು ಹಿಡಿಯದ ಕಾರಣ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಹಣ ಖಾಲಿಯಾಗುವವರೆಗೂ ಪಾರ್ಟಿ ಮಾಡಿ ಮತ್ತೆ ಕಳ್ಳತನ ಮಾಡುತ್ತಿದ್ದ. ಇದನ್ನೇ ಕಳೆದ 12 ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದಾನೆ ಎಂದು ಮಾಧಾಪುರ ಡಿಸಿಪಿ ಡಾ.ವಿನೀತ್ ಹೇಳಿದರು.
ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಪ್ರಭಾಕರ್‌ನನ್ನು 2020ರಲ್ಲಿ ವಿಶಾಖಪಟ್ಟಣ ಪೊಲೀಸರು ಬಂಧಿಸಿದ್ದರು. ಅದಾಗಲೇ 60 ಪ್ರಕರಣಗಳಿದ್ದವು. ಸಹಕೈದಿಯಿಂದ ಕಿರುಕುಳಕ್ಕೊಳಗಾದ ನಂತರ ಜೈಲಿನಿಂದ ಬಿಡುಗಡೆಯಾಗಿದ್ದನು. ಆದರೆ, ಪ್ರಭಾಕರ್ನ ದ್ವೇಷ ಮಾತ್ರ ಹೋಗಿರಲಿಲ್ಲ. ಕಿರುಕುಳ ನೀಡಿದ ಸಹಕೈದಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಪ್ರಭಾಕರ್‌ನನ್ನು, ಅದೇ ವರ್ಷ ಮಾರ್ಚ್ನಲ್ಲಿ ಮತ್ತೊಂದು ಪ್ರಕರಣದಲ್ಲಿ ವಿಶಾಖಪಟ್ಟಣ ಜೈಲಿಗೆ ಹಾಕಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕಾಡತೊಡಗಿದ್ದ. ಆಂಧ್ರ ಪ್ರದೇಶದಿಂದ ಗಚ್ಚಿಬೌಲಿಗೆ ಸ್ಥಳಾಂತರಗೊಂಡಿದ್ದ ದರೋಡೆಕೋರ, ಸಹಕೈದಿಯನ್ನು ಕೊಲ್ಲಲು ಬಿಹಾರದಿಂದ ಮೂರು ಬಂದೂಕು ಮತ್ತು ಗುಂಡುಗಳನ್ನು ತರಿಸಿದ್ದ. ಅಕ್ರಮ ಶಸ್ತ್ರಾಸ್ತ್ರಗಳನ್ನು ತರಿಸಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಬಂದಿತ್ತು. ಆದರೆ, ಪೊಲೀಸರ ಕೈಗೆ ಸಿಕ್ಕಿಬೀಳುವ ಭಯ ಇದ್ದುದರಿಂದ ಪ್ರಭಾಕರ್ ಸಾಮಾಜಿಕ ಜಾಲತಾಣ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಬಳಕೆಯಿಂದ ದೂರವೇ ಇದ್ದನು. ಅಲ್ಲದೇ ಮನೆ ಕಳ್ಳತನ ಮಾಡಿದರೆ, ತನ್ನ ಹಿಂದಿನ ಇತಿಹಾಸ ಆಧರಿಸಿ ಪೊಲೀಸರು ಹಿಡಿಯುತ್ತಾರೆಂದು ಭಾವಿಸಿ ಎಂಜಿನಿಯರಿಂಗ್ ಕಾಲೇಜುಗಳತ್ತ ಗಮನ ಹರಿಸಿದ್ದ. ಇತ್ತೀಚೆಗೆ ಮೊಯಿನಾಬಾದ್ ಮತ್ತು ನರಸಿಂಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮೂರು ಕಾಲೇಜುಗಳಲ್ಲಿ ಪ್ರಭಾಕರ್ ಕಳ್ಳತನ ಮಾಡಿದ್ದ. ಅಲ್ಲಿ ದೊರೆತ ಬೆರಳಚ್ಚುಗಳು ಪ್ರಭಾಕರ್ನದ್ದೇ ಎಂದು ಪೊಲೀಸರು ಗುರುತಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆತನ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಗಚ್ಚಿಬೌಲಿಯ ಪ್ರಿಸಂ ಪಬ್‌ನಲ್ಲಿರುವ ಮಾಹಿತಿ ಅರಿತ ಪೊಲೀಸರು ಶನಿವಾರ ದಾಳಿ ನಡೆಸಿದ್ದರು. ಹೆಡ್ ಕಾನ್ಸ್‌ಟೇಬಲ್ ವೆಂಕಟ್ ರೆಡ್ಡಿ ಅವನನ್ನು ಬಂಧಿಸಲು ಪ್ರಯತ್ನಿಸಿದಾಗ, ಪ್ರಭಾಕರ್ ಗುಂಡು ಹಾರಿಸಿ ಪರಾರಿಯಾಗಲು ಪ್ರತ್ನಿಸಿದ್ದನು. ಆದರೆ, ಎದೆಗುಂದದ ಪೊಲೀಸರು ಆತನನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ವಿನೀತ್ ತಿಳಿಸಿದ್ದಾರೆ.
ಇದನ್ನೂ ಓದಿ:48 ಬೈಕ್ ಕಳ್ಳತನ ಮಾಡಿದ್ದ ಖದೀಮನ ಬಂಧಿಸಿದ ಪೊಲೀಸರು: ಚೋರನಿಂದ ಬೈಕ್ ವಶಕ್ಕೆ ಪಡೆದ ಖಾಕಿ - BIKE THEFT CASE