ಕೋಟಾ(ರಾಜಸ್ಥಾನ): 35 ವರ್ಷದ ರಾಜಸ್ಥಾನದ ವ್ಯಕ್ತಿಯನ್ನು ಮದುವೆಯಾಗಿದ್ದ 78 ವರ್ಷದ ಅಮೆರಿಕದ ವೃದ್ಧೆ ಮೃತಪಟ್ಟಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ರಾಜಧಾನಿ ಜೈಪುರದ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಕ್ವೆಲಿನ್ ಮೃತ ಅಮೆರಿಕದ ಪ್ರಜೆ. ಇವರು ಎಂಟು ತಿಂಗಳ ಹಿಂದೆ ಕೋಟಾ ಜಿಲ್ಲೆಯ ಭರತ್ ಜೋಷಿ ಎಂಬವರನ್ನು ವಿವಾಹವಾಗಿ, ಇಲ್ಲಿಯೇ ವಾಸವಾಗಿದ್ದರು. ಕಳೆದ ವಾರದಿಂದ ಜಾಕ್ವೆಲಿನ್ ಹೊಟ್ಟೆ ಮತ್ತು ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದಾದ ನಂತರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಹೀಗಾಗಿ ವೈದ್ಯರು ಜೈಪುರದ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ನಾನ್ತಾ ಪೊಲೀಸ್ ಠಾಣಾಧಿಕಾರಿ ನವಲ್ ಕಿಶೋರ್ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿ, ''ಜಾಕ್ವೆಲಿನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ವಿದೇಶಿ ಮಹಿಳೆ ಆಗಿರುವುದಿಂದ ಇತರ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಭರತ್ ಜೋಷಿ ಅವರ ಮದುವೆ ಪ್ರಮಾಣಪತ್ರದ ಪ್ರಕಾರ, 2023ರ ಡಿಸೆಂಬರ್ 8ರಂದು ಇವರ ಮದುವೆ ನಡೆದಿತ್ತು. ಅಮೆರಿಕದ ಟೆಕ್ಸಾಸ್ನಲ್ಲಿ ಮಹಿಳೆಯ ಕುಟುಂಬವಿದ್ದರೂ, ಮದುವೆಯ ಬಳಿಕ ಕೋಟಾದ ನಾನ್ತಾ ಪ್ರದೇಶದಲ್ಲಿ ವಾಸಿಸುತ್ತಿದ್ದರು'' ಎಂದು ತಿಳಿಸಿದ್ದಾರೆ.
ಪತಿ ಭರತ್ ಮಾತನಾಡಿ, ''ವಾರದ ಹಿಂದೆ ಜಾಕ್ವೆಲಿನ್ಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಕರೆದುಕೊಂಡು ಹೋದಾಗ ಕೊಲೊನೋಸ್ಕೋಪಿಗೆ ಸಲಹೆ ನೀಡಿದ್ದರು. ಅದರಂತೆ, ಸರ್ಜರಿ ಮಾಡಿಸಲಾಗಿತ್ತು. ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ನಂತರದಲ್ಲಿ ಆರೋಗ್ಯ ಏರುಪೇರಾಗಿ ಪುನಃ ಐಸಿಯುಗೆ ಶಿಫ್ಟ್ ಮಾಡಿ, ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಬಳಿಕ ಜೈಪುರದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟರು'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸುಳ್ಳು ದಾಖಲೆ ಆರೋಪ: ಟ್ರೇನಿ IAS ಅಧಿಕಾರಿ ಹುದ್ದೆಯಿಂದ ಪೂಜಾ ಖೇಡ್ಕರ್ ಬಿಡುಗಡೆ, ಮಸ್ಸೂರಿ ಅಕಾಡೆಮಿಗೆ ವಾಪಸ್