ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಆರು ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ಅಗ್ನಿಮಿತ್ರ ಪಾಲ್, ಶಂಕರ್ ಘೋಷ್, ತಾಪ್ಸಿ ಮಂಡಲ್, ಬಂಕಿಮ್ ಘೋಷ್ ಮತ್ತು ಮಿಹಿರ್ ಗೋಸ್ವಾಮಿ ಸೇರಿದ್ದಾರೆ. ಸಂದೇಶಖಾಲಿ ಘಟನೆ ವಿರುದ್ಧ ಮಾತನಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶಾಸಕರ ಅಮಾನತು ವಿಧಾನಸಭೆಯೊಳಗೆ ಅಶಿಸ್ತು ಮತ್ತು ಗದ್ದಲದ ವರ್ತನೆಗೆ ಕಾರಣ ಎಂದು ವರದಿಯಾಗಿದೆ.
ರಾಜ್ಯ ವಿಧಾನಸಭೆಯ ನಿಯಮ 348ರ ಅಡಿಯಲ್ಲಿ ಶಾಸಕರನ್ನು ಅಮಾನತು ಮಾಡಲಾಗಿದೆ. ಈ ಪ್ರಸ್ತಾವನೆಯನ್ನು ಪಶ್ಚಿಮ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಮಂಡಿಸಿದರು. ಇದಾದ ಬಳಿಕ ಶಾಸಕರ ಅಮಾನತು ಪ್ರಸ್ತಾವನೆ ಅಂಗೀಕಾರವಾಯಿತು. ಆರು ಜನ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮತ್ತು ಸಚಿವ ಸೋವಂದೇವ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಪ್ರಸಕ್ತ ಅಧಿವೇಶನದಿಂದ ಉಳಿದ ಅವಧಿವರೆಗೆ ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಸಂದೇಶಖಾಲಿ ವಿರುದ್ಧ ಮಾತನಾಡಿದ್ದಕ್ಕೆ 'ಉಡುಗೊರೆ' ಸಿಕ್ಕಿದೆ: ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ಮಾತನಾಡಿ, ಮಹಿಳೆಯರ ಗೌರವಕ್ಕಾಗಿ ಬಿಜೆಪಿ ಸದಾ ಧ್ವನಿ ಎತ್ತುತ್ತದೆ. ಸಂದೇಶಖಾಲಿಯಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೆವು. ಸದನದ ಬಾವಿಗಿಳಿದು ಧ್ವನಿ ಎತ್ತಿದೆವು. ಆದರೆ, ಪ್ರಸ್ತುತ ವಿಧಾನಸಭೆಯ ಅಧಿವೇಶನದಿಂದ ನಮ್ಮನ್ನು ಅಮಾನತುಗೊಳಿಸಲಾಗಿದೆ. ಈ ಅಮಾನತು ನಮಗೆ ಉಡುಗೊರೆಯಾಗಿದೆ. ಏಕೆಂದರೆ ನಾವು ನಮ್ಮ ತಾಯಿ ಮತ್ತು ಸಹೋದರಿಯರ ಗೌರವವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸುವೆಂದು ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು.