ಸೋಲಾಪುರ (ಮಹಾರಾಷ್ಟ್ರ):ಉಜನಿ ಅಣೆಕಟ್ಟೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಭಾರಿ ದುರಂತ ಸಂಭವಿಸಿದೆ. ಆರು ಮಂದಿ ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಅಣೆಕಟ್ಟೆಯಲ್ಲಿ ಮುಳುಗಿದ ಆರು ಜನರ ಪತ್ತೆಗಾಗಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿತ್ತು.
ಸತತ ಎರಡನೇ ದಿನವೂ ಇಂದು ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸ್ ಸಬ್ಇನ್ಸ್ ಪೆಕ್ಟರ್ ರಾಹುಲ್ ಡೋಂಗ್ರೆ ದೋಣಿಯಲ್ಲಿದ್ದರು. ಬೋಟ್ ಮಗುಚಿ ಬಿದ್ದ ನಂತರ ನೀರಿನಲ್ಲಿ ಈಜಿ ದಡ ಸೇರಿ ತಮ್ಮ ಪ್ರಾಣ ಉಳಿಸಿಕೊಂಡರು. ದೋಣಿಯಲ್ಲಿ ಬದುಕುಳಿದ ಯುವ ಪೊಲೀಸ್ ಅಧಿಕಾರಿ ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಸಾವು:ಉಜನಿ ಅಣೆಕಟ್ಟೆಯಲ್ಲಿ ಮುಳುಗಿದ ಪೊಲೀಸ್ ಅಧಿಕಾರಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಡ್ಯಾಂನ ನೀರಿನಲ್ಲಿ ದೋಣಿ ಮುಳುಗಿದೆ ಎಂದು ಅವರು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸೋಲಾಪುರ ಮತ್ತು ಪುಣೆ ಜಿಲ್ಲೆಗಳ ಆಡಳಿತಗಳು ಉಜನಿ ಡ್ಯಾಂನಲ್ಲಿ ಮಂಗಳವಾರ ಸಂಜೆಯಿಂದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸುತ್ತಿವೆ. ಮೃತರನ್ನು ಗೋಕುಲ್ ದತ್ತಾತ್ರೆ ಜಾಧವ್ (ವಯಸ್ಸು.30), ಕೋಮಲ್ ಗೋಕುಲ್ ಜಾಧವ್ (ವಯಸ್ಸು 25), ಶುಭಂ ಗೋಕುಲ್ ಜಾಧವ್ (ವಯಸ್ಸು 1.5 ವರ್ಷ), ಮಹಿ ಗೋಕುಲ್ ಜಾಧವ್ (ವಯಸ್ಸು 3), ಕುಗಾಂವ್ ನಿವಾಸಿಗಳಾದ ಅನುರಾಗ್ ಅವಗಡೆ (35 ವರ್ಷ) ಮತ್ತು ಗೌರವ್ ಡೋಂಗ್ರೆ (16 ವರ್ಷ) ಎಂದು ಗುರುತಿಸಲಾಗಿದೆ.
ಬಲವಾದ ಗಾಳಿಗೆ ಮಗುಚಿದ ದೋಣಿ:ಸೋಲಾಪುರ ಮತ್ತು ಪುಣೆ ಜಿಲ್ಲೆಗಳ ಉಜನಿ ಅಣೆಕಟ್ಟಿನಲ್ಲಿ ಸೋಲಾಪುರ ಜಿಲ್ಲೆಯ ಕುಗಾಂವ್ ಗ್ರಾಮ ಮತ್ತು ಪುಣೆ ಜಿಲ್ಲೆಯ ಕಲಾಶಿ ಗ್ರಾಮದ ನಡುವೆ ಪ್ರಯಾಣಿಕ ದೋಣಿ ಮುಳುಗಿದೆ. ಗಾಳಿಯ ರಭಸಕ್ಕೆ ಪ್ರಯಾಣಿಕ ದೋಣಿ ಮಗುಚಿ ಬಿದ್ದಿದೆ. ಕರ್ಮಲಾ ತಾಲೂಕಿನ ಜರ್ರೆ ಮೂಲದ ಪತಿ ಮತ್ತು ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಮತ್ತು ಇಬ್ಬರು ಕುಗಾಂವ್ ನಿವಾಸಿಗಳು ಸೇರಿ ಒಟ್ಟು ಆರು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.