ನೀರಿನ ಪಾತ್ರೆಯೊಳಗೆ ಸಿಲುಕಿದ ತಲೆ, ಒದ್ದಾಡಿದ ಚಿರತೆ: 5 ಗಂಟೆಗಳ ಪ್ರಯತ್ನದ ಬಳಿಕ ರಕ್ಷಣೆ
🎬 Watch Now: Feature Video
ಧುಳೆ(ಮಹಾರಾಷ್ಟ್ರ): ನೀರು ಅರಸಿ ಬಂದ ಹೆಣ್ಣು ಚಿರತೆಯ ತಲೆ ಲೋಹದ ಪಾತ್ರೆಯೊಳಗೆ ಸಿಲುಕಿಕೊಂಡು ಒದ್ದಾಡಿತು. ಈ ಘಟನೆ ಮಹಾರಾಷ್ಟ್ರದ ಸಕ್ರಿ ತಾಲೂಕಿನ ದುಕ್ಷೇವಾಡ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸುಮಾರು ಐದು ಗಂಟೆಗಳ ಕಾಲ ಚಿರತೆ ಸಂಕಷ್ಟ ಅನುಭವಿಸಿತು. ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ನೀರು ಕುಡಿಯಲು ಹಳ್ಳಿಗೆ ಬಂದ ಚಿರತೆ ನೀರು ತುಂಬಿಸಿಟ್ಟಿದ್ದ ಪಾತ್ರೆಯೊಳಗೆ ಬಾಯಿ ಹಾಕಿದೆ. ಆದರೆ ಪಾತ್ರೆಯ ಬಾಯಿ ಚಿಕ್ಕದಾಗಿದ್ದರಿಂದ ತಲೆ ಅದರೊಳಗೆ ಸಿಲುಕಿಕೊಂಡು, ಹೊರಬರಲು ಹರಸಾಹಸಪಟ್ಟಿದೆ. ಘಟನೆಯ ಕುರಿತು ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ, ಪಜ್ಞೆ ತಪ್ಪಿಸಿದರು. ನಂತರ ಚಿರತೆಯನ್ನು ರಕ್ಷಿಸಲಾಯಿತು.
ಚಿರತೆಯನ್ನು ಪ್ರಜ್ಞೆ ಬರುವವರೆಗೆ ಬೋನ್ನಲ್ಲಿಟ್ಟು, ನಂತರ ಅರಣ್ಯಕ್ಕೆ ಬಿಡಲಾಯಿತು ಎಂದು ಕೊಂಡೈಬರಿ ಅರಣ್ಯ ಇಲಾಖೆಯ ಅರಣ್ಯ ವಲಯಾಧಿಕಾರಿ ಸವಿತಾ ಸೋನವಾನೆ ಮಾಹಿತಿ ನೀಡಿದರು.
ಇದನ್ನೂ ನೋಡಿ: ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಗಜರಾಜ ಪ್ರತ್ಯಕ್ಷ: ಆತಂಕಗೊಂಡ ಜನರು