ನವದೆಹಲಿ: ಸಾರ್ವಜನಿಕ ವಲಯದ ಕಲ್ಲಿದ್ದಲು ಉದ್ದಿಮೆಗಳು 2019-20 ರಿಂದ 2023-24ರವರೆಗಿನ ಐದು ವರ್ಷಗಳ ಅವಧಿಯಲ್ಲಿ 10,784 ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದಲ್ಲಿ 235 ಲಕ್ಷಕ್ಕೂ (2 ಕೋಟಿ 35 ಲಕ್ಷ) ಅಧಿಕ ಸಸಿಗಳನ್ನು ನೆಟ್ಟಿವೆ ಎಂದು ಕಲ್ಲಿದ್ದಲು ಸಚಿವಾಲಯ ಗುರುವಾರ ತಿಳಿಸಿದೆ.
ಕೋಲ್ ಇಂಡಿಯಾ ಲಿಮಿಟೆಡ್ ನೇತೃತ್ವದ ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ಯುಗಳು ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಕಾಲಾನಂತರದಲ್ಲಿ ತಮ್ಮ ಉತ್ಪಾದನಾ ಮಟ್ಟವನ್ನು ಹೆಚ್ಚಿಸಿವೆ ಮಾತ್ರವಲ್ಲದೆ, ಇಂಗಾಲಾಮ್ಲದ ಪ್ರಮಾಣ ತಗ್ಗಿಸುವಿಕೆ ಮತ್ತು ಸುಸ್ಥಿರ ಕ್ರಮಗಳನ್ನು ಜಾರಿಗೆ ತರುವ ಮೂಲಕ ಸ್ಥಳೀಯ ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡಿವೆ ಎಂದು ಸಚಿವಾಲಯ ತಿಳಿಸಿದೆ.
ಸುಸ್ಥಿರ ಹಸಿರೀಕರಣ ಉಪಕ್ರಮದ ಭಾಗವಾಗಿ, ಪಿಎಸ್ಯುಗಳು ಓವರ್ ಬರ್ಡನ್ ಡಂಪ್ಗಳು, ಗಣಿ ರಸ್ತೆಗಳು, ಗಣಿ ಪರಿಧಿಗಳು, ವಸತಿ ಕಾಲೋನಿಗಳು ಮತ್ತು ಗುತ್ತಿಗೆ ಪ್ರದೇಶದ ಹೊರಗೆ ಲಭ್ಯವಿರುವ ಭೂಮಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವ್ಯಾಪಕವಾದ ಸ್ಥಳೀಯ ಜಾತಿ ಮರಗಳ ನೆಡುತೋಪು ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ವೈಜ್ಞಾನಿಕವಾಗಿ ನೆಡುತೋಪುಗಳನ್ನು ಸ್ಥಾಪಿಸಲು ವೈಜ್ಞಾನಿಕ ಸಂಸ್ಥೆಗಳೊಂದಿಗೆ ಈ ಪಿಎಸ್ಯುಗಳು ಒಪ್ಪಂದ ಮಾಡಿಕೊಂಡಿವೆ.
ಉಪಗ್ರಹ ಕಣ್ಗಾವಲಿನ ಮೂಲಕ ಅರಣ್ಯ ಪುನರುಜ್ಜೀವನ ಯೋಜನೆಯ ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ನೆಡುತೋಪುಗಳಲ್ಲಿ ನೆರಳು ನೀಡುವ ಮರಗಳು, ಅರಣ್ಯ ಬೆಳೆಸುವ ಉದ್ದೇಶದ ನಿರ್ದಿಷ್ಟ ಜಾತಿಯ ಮರಗಳು, ಔಷಧೀಯ ಮತ್ತು ಗಿಡಮೂಲಿಕೆ ಸಸ್ಯಗಳು, ಹಣ್ಣು ಬಿಡುವ ಮರಗಳು, ವಾಣಿಜ್ಯ ಮೌಲ್ಯದ ಮರಗಳು ಮತ್ತು ಅಲಂಕಾರಿಕ ಅವೆನ್ಯೂ ಸಸ್ಯಗಳನ್ನು ಒಳಗೊಂಡ ವೈವಿಧ್ಯಮಯ ಗಿಡಗಳನ್ನು ಬೆಳಸಲಾಗುತ್ತಿದೆ. ಹಣ್ಣು ಬಿಡುವ ಪ್ರಭೇದಗಳು, ಔಷಧೀಯ ಸಸ್ಯಗಳ ಜೊತೆಗೆ, ಜೀವವೈವಿಧ್ಯ ಸಂರಕ್ಷಣೆಗೆ ಕೊಡುಗೆ ನೀಡುವುದಲ್ಲದೆ ಸ್ಥಳೀಯ ಸಮುದಾಯಗಳಿಗೆ ಹೆಚ್ಚುವರಿ ಸಾಮಾಜಿಕ ಹಾಗೂ ಆರ್ಥಿಕ ಲಾಭ ತರುತ್ತವೆ.
ಇತ್ತೀಚಿನ ದಿನಗಳಲ್ಲಿ ಮಿಯಾವಾಕಿ ವಿಧಾನದಲ್ಲಿ ಸಹ ಕಲ್ಲಿದ್ದಲು ಮತ್ತು ಲಿಗ್ನೈಟ್ ಪಿಎಸ್ಯುಗಳು ನೆಡುತೋಪು ಬೆಳೆಸುತ್ತಿವೆ. ಮಿಯಾವಾಕಿ ತಂತ್ರವು ಅರಣ್ಯೀಕರಣ ಮತ್ತು ಪರಿಸರ ಪುನಃಸ್ಥಾಪನೆಯ ಒಂದು ವಿಶಿಷ್ಟ ವಿಧಾನವಾಗಿದೆ. ಇದನ್ನು ಜಪಾನಿನ ಸಸ್ಯಶಾಸ್ತ್ರಜ್ಞ ಡಾ. ಅಕಿರಾ ಮಿಯಾವಾಕಿ ಪ್ರಾರಂಭಿಸಿದರು. ಸೀಮಿತ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. ಈ ನವೀನ ವಿಧಾನದ ಮೂಲಕ ಕೇವಲ 10 ವರ್ಷಗಳಲ್ಲಿ ದಟ್ಟವಾದ ಅರಣ್ಯ ಬೆಳೆಸಬಹುದು. ಒಂದು ಶತಮಾನದಲ್ಲಿ ಬೆಳೆಸಬಹುದಾದಷ್ಟು ಅರಣ್ಯವನ್ನು ಮಿಯಾವಾಕಿ ವಿಧಾನದ ಮೂಲಕ ಒಂದು ದಶಕದಲ್ಲಿಯೇ ಬೆಳೆಸಬಹುದು.
ಇದನ್ನೂ ಓದಿ : ಡ್ಯೂಯೆಲ್ ಚಿಪ್, 50 ಎಂಪಿ ಕ್ಯಾಮೆರಾದ ಹೊಸ iQOO ಸ್ಮಾರ್ಟ್ಫೋನ್ ಬಿಡುಗಡೆ