ಶಿವಮೊಗ್ಗ: ನಗರದಲ್ಲಿ ಬುಧವಾರದಂದು ನಡೆದಿದ್ದ ಗ್ಯಾಂಗ್ ವಾರ್ನಲ್ಲಿ ಗಾಯಗೊಂಡಿದ್ದ ರೌಡಿ ಶೀಟರ್ ಯಾಸೀನ್ ಖುರೇಷಿ (30) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುರಿಸಿರೆಳೆದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಮೊನ್ನೆ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಜನತಾ ಮಟನ್ ಸ್ಟಾಲ್ ಮುಂಭಾಗ ಯಾಸೀನ್ ಖುರೇಷಿ ಮೇಲೆ ಆದಿಲ್ ಗುಂಪು ಹಾಗೂ ಇತರೆ ಎರಡು ಗುಂಪುಗಳು ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಯಾಸೀನ್ ಕಡೆಯವರು ಹಲ್ಲೆ ನಡೆಸಲು ಬಂದವರ ಮೇಲೆ ಮನಸ್ಸಿಗೆ ಬಂದಂತೆ ಹಲ್ಲೆ ನಡೆಸಿದ್ದರು. ಈ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಸುಹೇಲ್ ಅಲಿಯಾಸ್ ಸೇಬು ಹಾಗೂ ಗೌಸ್ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೇ, ಚಪ್ಪಡಿ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಈ ಗ್ಯಾಂಗ್ ವಾರ್ಗೆ ಸಂಬಂಧಿಸಿದಂತೆ ಸೆಕ್ಷನ್ 302ರ ಅಡಿ 10 ಜನರನ್ನು ಹಾಗೂ 307ರ ಅಡಿ 8 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದರು.
ಏನಿದು ಪ್ರಕರಣ? ಹಳೇ ವೈಷಮ್ಯದ ಹಿನ್ನೆಲೆ ಗುಂಪುಗಳ ನಡುವೆ ಬುಧವಾರ ಮಾರಾಮಾರಿ ನಡೆದಿತ್ತು. ಈ ವೇಳೆ ಗಾಯಗೊಂಡಿದ್ದ ಸೇಬು (32) ಹಾಗೂ ಗೌಸ್ (30) ಮೃತಪಟ್ಟಿದ್ದರು. ಈ ಪೈಕಿ ಓರ್ವ ಕೆ.ಆರ್.ಪುರಂ ಹಾಗೂ ಇನ್ನೋರ್ವ ಅಣ್ಣಾ ನಗರದ ನಿವಾಸಿಗಳೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಖುರೇಷಿಯ ಗುಂಪು ಹಾಗೂ ಸುಹೇಲ್ ಗುಂಪುಗಳ ನಡುವೆ ಮೊದಲು ಅಣ್ಣಾ ನಗರದಲ್ಲಿ ಗಲಾಟೆ ಪ್ರಾರಂಭವಾಗಿದೆ. ಬಳಿಕ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ಗಲಾಟೆ ಮುಂದುವರಿಸಿದ್ದಾರೆ. ಖುರೇಷಿ ಗುಂಪು ಸೇಬು ಹಾಗೂ ಗೌಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಘಟನೆ ನಡೆದ ದಿನ ಮಾಹಿತಿ ನೀಡಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಬಲ್ ಮರ್ಡರ್: ಕೊಲೆ ಮಾಡಲು ಬಂದವರೇ ಕೊಲೆಯಾದ್ರಾ? - Double Murder
ಘಟನೆ ಬಳಿಕ ಮಾತನಾಡಿದ್ದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ''ಹಳೇ ವೈಷಮ್ಯದಿಂದ ಗಲಾಟೆ ನಡೆದಿದ್ದು, ಡಬಲ್ ಮರ್ಡರ್ ಆಗಿದೆ. ಸೇಬು, ಗೌಸ್ ಕೊಲೆಯಾದವರು. ಈ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide